ಮಂಗಳೂರು, ಮಾ 28 (DaijiworldNews/MS): ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮೇ ೧೦ ರಂದು ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸಿ ಸ್ವ ಪಕ್ಷದ ಕಾರ್ಯಕರ್ತರು ಮತ್ತು ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಎಂ ನಂದಕುಮಾರ್ ಅಭಿಮಾನಿ ಬಳಗದ ಹಲವು ಕಾರ್ಯಕರ್ತರು ನಗರದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸುಳ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ಪಕ್ಷ ಮರುಪರಿಶೀಲಿಸಿ, ಬದಲಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ ಎಚ್.ಎಂ.ನಂದಕುಮಾರ್ ಅವರನ್ನು ಕಣಕ್ಕಿಳಿಸಬೇಕುಇ ದೇ ವೇಳೆ ಒತ್ತಾಯ ಕೇಳಿಬಂತು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಮನವಿ ಸ್ವೀಕರಿಸಲು ಮುಂದಾದರೂ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸುವಂತೆ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಬಾಲಕೃಷ್ಣ, "ಬಿಜೆಪಿಯನ್ನು ಮಣಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಎಚ್ಎಂ ನಂದಕುಮಾರ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಬೇಕು. ಪಕ್ಷ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಪಕ್ಷ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಗ ಎಚ್.ಎಂ.ನಂದಕುಮಾರ್ ಅವರನ್ನು ಕಣಕ್ಕಿಳಿಸಬೇಕು" ಎಂದು ಒತ್ತಾಯಿಸಿದರು.
ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.