ಉಡುಪಿ ಮಾ 28 (DaijiworldNews/MS): ಮುಖಕ್ಕೆ ಹಚ್ಚುವ ಕ್ರೀಂನ್ನು ಆನ್ ಲೈನ್ ನಲ್ಲಿ ಖರೀದಿಸಲು ಹೋಗಿ ಮಹಿಳೆಯೊಬ್ಬರು 1.97ಲಕ್ಷ ಕಳೆದುಕೊಂಡಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿಯ 32 ವರ್ಷದ ಮಹಿಳೆಯೋರ್ವರು ಮುಖಕ್ಕೆ ಹಚ್ಚುವ ಕ್ರೀಂ ನ್ನು ಆನ್ಲೈನ್ ನಲ್ಲಿ ಹುಡುಕುತ್ತಿದ್ದ ಸಂದರ್ಭದಲ್ಲಿ Cosderma-App ನಲ್ಲಿ ಕಂಡುಬಂದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಆ ವ್ಯಕ್ತಿ ಕಳುಹಿಸಿದ ಲಿಂಕ್ paytid.co.in ನಲ್ಲಿ ರಿಜಿಸ್ಟರ್ ಮಾಡಿದ್ದರು. ಬಳಿಕ ಆ ಅಪರಿಚಿತ ವ್ಯಕ್ತಿ ಮಾ.೨೩ ರಂದು ಕರೆ ಮಾಡಿ, ತಾನು ಮೇಲೆ ನಮೂದಿಸಿದ ಕಂಪೆನಿಯವನೆಂದು ತಿಳಿಸಿ, ನೀವು ಈ ಹಿಂದೆ ಮಾಡಿರುವ ರಿಜಿಸ್ಟರ್ ಸರಿಯಿಲ್ಲ ಎಂದು ಹೇಳಿ ಬೇರೊಂದು ಲಿಂಕ್ ಕಳುಹಿಸಿದ್ದು, ಬಳಿಕ ಅದೇ ಕಂಪೆನಿಯವನೆಂದು ನಂಬಿ, ಮಹಿಳೆ ಆತನು ಕಳುಹಿಸಿದ ಲಿಂಕ್ ನಲ್ಲಿ ವಿವರವನ್ನು ಅಪ್ಡೇಟ್ ಮಾಡಿದ್ದಾರೆ.
ಆದರೆ ಇದಾದ ಬಳಿಕ ಮಹಿಳೆ ಖಾತೆ ಹೊಂದಿದ್ದ ಸಾಲಿಗ್ರಾಮ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಿಂದ ಮಾ. 24 ರಂದು 99,999 ರೂ. ಮಾ.25 ರಂದು ಕ್ರಮವಾಗಿ 90,000 ರೂ. ಮತ್ತು 8,000 ರೂ. ಹಣ ಕಡಿತಗೊಂಡಿದೆ. ಯಾರೋ ಅಪರಿಚಿತ ವ್ಯಕ್ತಿಗಳು Cosderma ಕಂಪೆನಿಯವರೆಂದು ಹೇಳಿ, ಮುಖಕ್ಕೆ ಹಚ್ಚುವ ಕ್ರೀಂ ನೀಡುವುದಾಗಿ ನಂಬಿಸಿ, ವಿವರ ಪಡೆದು, ಅವರ ಖಾತೆಯಿಂದ ಒಟ್ಟು ರೂಪಾಯಿ 1,97,999 ರೂ. ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡು ಕ್ರೀಂನ್ನು ನೀಡದೇ ಪಡೆದ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2023 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.