ಉಡುಪಿ, ಮಾ 28 (DaijiworldNews/MS): ಮೊದಲ ಬಾರಿಗೆ ಮತದಾನ ಮಾಡುವ ವಿದ್ಯಾರ್ಥಿಗಳು ವ್ಯಕ್ತಿಗಿಂತ ಪಕ್ಷಕ್ಕೆ ಹೆಚ್ಚಿನ ಒತ್ತನ್ನು ನೀಡಿ ತಮ್ಮ ಹಕ್ಕನ್ನು ಚಲಾಯಿಸುವುದು ಉತ್ತಮ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.
ಅವರು ಮಂಗಳವಾರ, ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ನಡೆದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸ್ವಾತಂತ್ರ್ಯ ನಂತರದಲ್ಲಿ ಸಂಯುಕ್ತ ಭಾರತ ವಿಷಯದ ಕುರಿತಾಗಿ ಸಂವಾದ ನಡೆಸಿ ವಿದ್ಯಾರ್ಥಿಯೊಬ್ಬರು ಅಭ್ಯರ್ಥಿಯನ್ನು ಯಾವ ಮಾನದಂಡದ ಆಧಾರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ ಚಲಾಯಿಸಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, ಭಾರತದ ಪ್ರಜಾಪ್ರಭುತ್ವದಲ್ಲಿ ಏಕ ವ್ಯಕ್ತಿ ಗೆದ್ದಿರುವುದು ಅಪರೂಪ. 80% ಪಕ್ಷವನ್ನು ಗುರುತಿಸಿ, 20% ವ್ಯಕ್ತಿಯನ್ನು ಆಧರಿಸಿ ಮತ ನೀಡಿದರೇ ಉತ್ತಮ. ಪಕ್ಷಕ್ಕೆ ಮತ ನೀಡಿದರೇ ವ್ಯಕ್ತಿ ತಪ್ಪು ಮಾಡಿದಾಗ ಪಕ್ಷವು ಪ್ರಶ್ನಿಸುತ್ತದೆ ಎಂದು ಉತ್ತರಿಸಿದರು.
ಪ್ರಸ್ತುತ ಭಾರತ ದೇಶದಲ್ಲಿ 67% ಯುವಕರಿದ್ದಾರೆ. ಈ ಯುವಕರಲ್ಲಿ ಹೆಚ್ಚಿನವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ. ಅವರಲ್ಲಿ ಪ್ರಜಾಪ್ರಭುತ್ವದ ಬಗೆಗೆ ಜ್ಞಾನವನ್ನು ವೃದ್ದಿಸಿ, ಮುಂದಿನ ಪೀಳಿಗೆಗೆ ಉತ್ತಮ ನಾಯಕರಾಗಿ ರೂಪುಗೊಳಿಸಲು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅಭಿಪ್ರಾಯಪಟ್ಟರು.
ಬೆಂಗಳೂರು, ಬಾಂಬೆ, ಚೆನೈನಂತಹ ಮಹಾನಗರಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಯುವಕರು ತಮ್ಮ ಒಂದು ಮತದಿಂದ ಏನಾಗುತ್ತದೆ ಎಂಬ ಭಾವನೆಯೊಂದಿಗೆ ಮತವನ್ನು ಚಲಾಯಿಸುತ್ತಿಲ್ಲ. ಈ ಭಾವನೆಯನ್ನು ಯುವಕರು ದೂರ ಮಾಡಬೇಕು. ಪ್ರಜ್ಞಾಪ್ರಭುತ್ವದಲ್ಲಿ ನಂಬಿಕೆಯನ್ನು ಬೆಳೆಸಿಕೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವದ ಮೇಲೆ ಯುವಜನಾಂಗದ ಒಂದು ವರ್ಗಕ್ಕಿರುವ ಸಿಟ್ಟನ್ನು ದೂರ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತದ ರಾಜಕಾರಣದಲ್ಲಿ ರಾಜಕೀಯ ನಾಯಕರಿಗೆ ಜನನ ದಿನಾಂಕ ಇದೆ. ಆದರೆ ಮರಣ ದಿನಾಂಕ ಇಲ್ಲ. ಇಳಿ ವಯಸ್ಸಿನಲ್ಲಿಯೂ ತಾನು ಯುವಕನೆಂದು ಹೇಳುತ್ತಾ ಅಧಿಕಾರಕ್ಕೆ ಆಸೆ ಪಡುತ್ತಾರೆ. ಇದರಿಂದಾಗಿ ಎರಡನೇ ಪೀಳಿಗೆಯ ನಾಯಕತ್ವಕ್ಕೆ ಅವಕಾಶ ಸಿಗುತ್ತಿಲ್ಲ ಎಂದವರು ಹೇಳಿದರು.
ಇಂದಿನ ಪೀಳಿಗೆಯ ಮಕ್ಕಳಿಗೆ ಜೀವನದ ಅನುಭವವನ್ನು ಪಡೆಯಲು ಸಮಾಜ ಅವಕಾಶವನ್ನು ನೀಡುತ್ತಿಲ್ಲ. ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಇಂದಿನ ಮಕ್ಕಳು ಸಂಪೂರ್ಣವಾಗಿ ವೀಕ್ಷಸಿದರೇ, ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ದುಃಖ ಅರಿವಾಗುತ್ತದೆ. ಹಾಗೆಯೇ ಮಗು ಹುಟ್ಟಿದಾಗ, ಕುಟುಂಬದ ಸಂಭ್ರಮವನ್ನು ನೋಡಿದರೇ ಜೀವನದಲ್ಲಿ ಹುಟ್ಟು ಮತ್ತು ಸಾವಿನ ಮೌಲ್ಯದ ಅರಿವಾಗುತ್ತದೆ ಎಂದರು.