ಬಂಟ್ವಾಳ, ಮಾ 28 (DaijiworldNews/SM): ವಿಧಾನ ಸಭೆಯ ಚುನಾವಣೆಯ ದಿನ ಘೋಷಣೆಗೆ ದಿನಗಣನೆ ಆರಂಭಗೊಂಡಿರುವ ನಡುವೆ, ರಾಜಕೀಯ ಪಕ್ಷಗಳಿಗೆ ನೀತಿಸಂಹಿತೆಯ ಭಯ ಆವರಿಸಿದೆ. ಚುನಾವಣಾ ಆಯೋಗ ಇನ್ನೂ ದಿನಾಂಕ ಘೋಷಿಸಿಲ್ಲ, ಆದರೆ ಇದಕ್ಕೆ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳನ್ನು ನಡೆಸುವಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಪ್ರಾಯೋಗಿಕ ನೀತಿಸಂಹಿತೆ ಅನುಷ್ಠಾನಗೊಂಡಂತಾಗಿದೆ.
ರಾಜಕೀಯ ಪಕ್ಷಗಳ ಧುರೀಣರ ಭಾವಚಿತ್ರ ಇರುವ ಎಲ್ಲಾ ಬೋರ್ಡ್ ಗಳನ್ನು, ಬ್ಯಾನರ್, ಕಟೌಟ್ ಗಳ ತೆರವುಗೊಳಿಸುತ್ತಿರುವ ಜಿಲ್ಲಾಡಳಿತ, ಸರ್ಕಾರಿ ಜಾಹೀರಾತುಗಳ ದೊಡ್ಡ ದೊಡ್ಡ ಕಟೌಟ್ ಗಳಲ್ಲಿರುವ ಜನಪ್ರತಿನಿಧಿಗಳ ಮುಖ ಕಾಣದಂತೆ ಮರೆ ಮಾಚಿದೆ. ರಾಜಕೀಯ ಪಕ್ಷಗಳ ಚಿಹ್ನೆಗಳು, ರಾಜಕೀಯ ಪಕ್ಷಗಳ ನಾಯಕರ ಭಾವಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಇಲ್ಲವಾಗಿದ್ದು ಈ ಕಾರಣಕ್ಕೆ ಅಂತಹಾ ಚಿತ್ರಗಳನ್ನು ಮರೆಮಾಡುವ ಕಾರ್ಯಭರದಿಂದ ಸಾಗಿದೆ. ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣ ವೃತ್ತದ ಬಳಿಯಲ್ಲಿನ ವಾರ್ತಾ ಇಲಾಖೆಯ ಕಟೌಟ್ ನಲ್ಲಿದ್ದ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಬಾವಚಿತ್ರ, ಇಲ್ಲೆ ಹತ್ತಿರದ ರೈಲ್ವೇ ಮೇಲ್ಸೇತುವೆಗೆ ಅಂಟಿಸಿದ ಬಿಜೆಪಿ ಪೋಸ್ಟರ್ ನಲ್ಲಿರುವ ಪ್ರಧಾನ ನರೇಂದ್ರ ಮೋದಿಯವರ ಭಾವಚಿತ್ರಗಳಿಗೆ ಕಾಗದ ಅಂಟಿಸಲಾಗಿದೆ. ಜೊತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ವಾಹನ ತಪಾಸಣೆ ನಡೆಸುತ್ತಿದ್ದು, ದಾಖಲೆ ಇಲ್ಲದೆ ಸಾಗಿಸುವ ಹಣದ ಬಗ್ಗೆ ವಿಶೇಷ ನಿಗಾ ಇರಿಸಿದೆ.
ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳ ಅಕ್ರಮ, ಆಮಿಷಗಳಿಗೆ ಕಡಿವಾಣ ಹಾಕುವ ಮೂಲಕ ಚುನಾವಣಾ ಆಯೋಗ "ಜಾಣನಡೆ" ಅನುಸರಿಸುತ್ತಿದೆ.