ಕಾಸರಗೋಡು, ನ 4 : ಮಂಗಳೂರು ಸೇರಿದಂತೆ ಕಾಸರಗೋಡಿನ ಹಲವೆಡೆ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀರ್ಚಾಲು ಬೇಳ ನಿವಾಸಿಯೋರ್ವನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೇಳದ ಅಬ್ದುಲ್ ಸಹೀರ್ (20) ಎಂದು ಗುರುತಿಸಲಾಗಿದೆ. ನವಂಬರ್ 14 ರಂದು ಕಾಸರಗೋಡಿನ ಟೂರಿಸ್ಟ್ ಹೋಮ್ ನ ಮೆನೇಜರ್ ಅವರ 40 ಸಾವಿರ ರೂ. ನಗದು, ಎಟಿಎಂ ಕಾರ್ಡ್ ಒಳಗೊಂಡ ಪರ್ಸನ್ನು ಕಳವುಗೈದ ಪ್ರಕರಣದ ಆರೋಪಿಯಾಗಿದ್ದನು. ಇದೀಗ ಈ ಬಗ್ಗೆ ಲಭಿಸಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ.
ಮೂರು ತಿಂಗಳಿಂದ ಈತ ಇದೆ ಟೂರಿಸ್ಟ್ ಹೋಮ್ ನಲ್ಲಿ ವಾಸವಾಗಿದ್ದನು. ಸಮೀಪದ ಬೈಕ್ ಶೋ ರೂಂ ನ ಕೆಲಸಗಾರನೆಂದು ನಂಬಿಸಿ ಈತ ವಾಸವಾಗಿದ್ದು, ಈ ನಡುವೆ ಟೂರಿಸ್ಟ್ ಹೋಮ್ ನ ಮೇಜಿನಲ್ಲಿದ್ದ ನಗದು ಮತ್ತು ಪರ್ಸನ್ನು ಕಳವು ಮಾಡಿದ್ದನು. ಸಿಸಿ ಟಿವಿ ಕ್ಯಾಮರಾ ವನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ, ಬದಿಯಡ್ಕ, ಕಾಸರಗೋಡು, ಕಾಞ೦ಗಾಡ್ ಮೊದಲಾದೆಡೆ ಈತನ ವಿರುದ್ಧ ಪ್ರಕರಣಗಳಿವೆ.
ಕಳೆದ ವರ್ಷ ಟಿಪ್ಪು ಜಯಂತಿ ದಿನ ತಂಡವೊಂದರ ಜೊತೆ ಉಡುಪಿಗೆ ತೆರಳಿದ್ದ ಈತ ರಾಘವೇಂದ್ರ ಎಂಬವರ ಮೊಬೈಲ್, ಎರಡು ಎಟಿಎಂ, 950 ರೂ. ಕಳವು ಮಾಡಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.