ಕಾಸರಗೋಡು, ಮಾ 27 (DaijiworldNews/SM): ನೀರ್ಚಾಲು ಮಾನ್ಯದಿಂದ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕರೋರ್ವರ ಮೃತದೇಹ ಕಾಸರಗೋಡು ನಗರದ ಖಾಸಗಿ ಆಸ್ಪತ್ರೆ ಪರಿಸರದ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.
ಮಾನ್ಯ ಜ್ಞಾನೋದಯ ಅನುದಾನಿತ ಶಾಲೆಯ ಶಿಕ್ಷಕ, ಮಟ್ಟನ್ನೂರಿನ ಟಿ.ವಿ. ಪ್ರದೀಪ್ ಕುಮಾರ್(51) ಮೃತ ಪಟ್ಟವರು. ದುರ್ವಾಸನೆ ಉಂಟಾದ ಹಿನ್ನಲೆಯಲ್ಲಿ ಪರಿ ಸರವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾವಿಯಲ್ಲಿ ಗಮನಿಸಿದಾಗ ಮೃತದೇಹ ಪತ್ತೆಯಾಗಿದೆ. ಕೊನೆಗೆ ತನಿಖೆ ನಡೆಸಿದಾಗ ಅದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕ ಪ್ರದೀಪ್ ಕುಮಾರ್ ರವರ ಮೃತದೇಹ ಎಂದು ಗುರುತು ಪತ್ತೆ ಹಚ್ಚಲಾಯಿತು.
ಮಾರ್ಚ್ 22ರಂದು ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು.
ಈ ನಡುವೆ ಸೋಮವಾರ ಮಧ್ಯಾಹ್ನ ನಗರದ ಕರಂದಕ್ಕಾಡ್ ಅಶ್ವಿನಿ ನಗರದ ಆಸ್ಪತ್ರೆ ಬಳಿಯ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ದುರ್ಗಂಧ ಕಂಡು ಬಂದ ಹಿನ್ನಲೆ ಯಲ್ಲಿ ಪರಿಸರ ವಾಸಿಗಳು ಗಮನಿಸಿದಾಗ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತ ದೇಹವನ್ನು ಮೇಲಕ್ಕೆತ್ತಿದರು. ಕುಟುಂಬಸ್ಥರು ಬಂದು ಗುರುತು ಪತ್ತೆ ಹಚ್ಚಿದರು. ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.