ಸುಳ್ಯ, ಮಾ 27 (DaijiworldNews/MS): ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಸುಳ್ಯ ಪೇಟೆಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಚೇರಿಯನ್ನು ಜಪ್ತಿ ಮಾಡಿದೆ.
ಸುಳ್ಯ ತಾಲೂಕಿನ ಗಾಂಧಿನಗರ ಅಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಪಿಎಫ್ಐ ಕಚೇರಿ ಇದ್ದು ಇದನ್ನು ವಶಕ್ಕೆ ಪಡೆದಿದೆ.
ವಶಪಡಿಸಿಕೊಂಡ ಆಸ್ತಿಯ ಪ್ರತಿಯನ್ನು ಮಾಲೀಕರು, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಲಾಗಿದೆ. ಆಸ್ತಿಯನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಬಾರದು ಪರಾಬಾರೆ ಮಾಡಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಯಾವುದೇ ಆಸ್ತಿಯನ್ನು ಕಚೇರಿಯಿಂದ ಸ್ಥಳಾಂತರಿಸುವುದು ಅಥವಾ ನವೀಕರಣ ಕಾರ್ಯವನ್ನು ಕೈಗೊಳ್ಳದಂತೆ ನಿರ್ದೇಶನಗಳನ್ನು ಎನ್ಐಎ ನೀಡಿದೆ.
ಇದೇ ಕಚೇರಿಯಲ್ಲಿ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 20 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದು ,ಚಾರ್ಜ್ ಶೀಟ್ನಲ್ಲಿ 1,500 ಪುಟಗಳು ಮತ್ತು 240 ಸಾಕ್ಷಿಗಳ ಹೇಳಿಕೆಗಳಿವೆ.
ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ರಾಜ್ಯದಲ್ಲಿ ಹಿಜಾಬ್ ಮತ್ತು ಹಲಾಲ್ ಬಿಕ್ಕಟ್ಟಿನ ಉತ್ತುಂಗದಲ್ಲಿದ್ದ ವೇಳೆ ಪ್ರವೀಣ್ ಅವರನ್ನು ಕಡಿದು ಕೊಲ್ಲಲಾಗಿತ್ತು.ಪ್ರವೀಣ್ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದು, ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ನಡೆಸಿದ್ದರು.