ಮಂಗಳೂರು, ಮಾ 27 (DaijiworldNews/MS): ಕಾರ್ಮಿಕ ಸ್ನೇಹಿಯಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಮತ್ಸ್ಯ ಸಂಪದ ಯೋಜನೆಯನ್ನು ರೂಪಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ತಿಳಿಸಿದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗೆ ಸ್ವಉದ್ಯೋಗ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ಮಾ. 26 ಭಾನುವಾರ ಸಂಜೆ ತ್ರಿಚಕ್ರ ವಾಹನ ಮತ್ತು ಮೀನು ಖರೀದಿ ಅಪ್ಲಿಕೇಶನ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಕಡಿಮೆ ಕಾಲಮಿತಿಯಲ್ಲಿ ರೂಪಿಸಲಾದ ಈ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ, ಸದ್ಯ ಪ್ರಾಯೋಗಿಕವಾಗಿ ಲೋಕಾರ್ಪಣೆಯಾಗಿದೆ. ಕಾರ್ಮಿಕರು ಆರ್ಥಿಕವಾಗಿ ಮೇಲಕ್ಕೆ ಬರಬೇಕೆನ್ನುವ ಪರಿಕಲ್ಪನೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಮೀನು ಮನುಷ್ಯನಿಗೆ ಅತ್ಯುಪಯುಕ್ತ ಪೌಷ್ಟಿಕಾಂಶ ನೀಡುವ ಆಹಾರವಾಗಿದೆ, ಅದರಲ್ಲಿ ರೋಗ ನಿರೋಧಕ ಶಕ್ತಿ ನೀಡುತ್ತದೆ, ಆ ನಿಟ್ಟಿನಲ್ಲಿ ಗ್ರಾಹಕರಿಗೆ ತಾಜಾ ಮೀನು ದೊರೆಯಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಎ.ವಿ.ತೀರ್ಥರಾಮ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಪ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಕೆ. ಗಣೇಶ್, ಸುಳ್ಯ ತಹಶಿಲ್ದಾರ್ ಮಂಜುನಾಥ್, ಸುಳ್ಯ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಕಿಶೋರಿ ಶೇಟ್ ಹಾಗೂ ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ಡೀನ್ ಡಾ. ಎಚ್.ಎನ್. ಆಂಜನಪ್ಪ ವೇದಿಕೆಯಲ್ಲಿದ್ದರು.
ಇಲಾಖೆಯ ಅಪರ ನಿರ್ದೇಶಕ ದಿನೇಶ್ ಕುಮಾರ್ ಕಳೆ ಸ್ವಾಗತಿಸಿದರು. ಇಲಾಖೆಯ ಅಪರ ನಿರ್ದೇಶಕ ತಿಪ್ಪೇಸ್ವಾಮಿ ವಂದಿಸಿದರು.ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ. ಆರ್. ಗೋಪಾಲಕೃಷ್ಣ ಪ್ರಾರ್ಥಿಸಿದರು. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ವಿವಿಧ ಫಲಾನುಭವಿಗಳಿಗೆ ಸಹಾಯಧನ ದಾಖಲೆ, ನಿಗಮದ ಅಧ್ಯಕ್ಷರಿಗೆ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಿತು. ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯೋಜನೆ ವಿವರ:
ಪ್ರಾಯೋಗಿಕ ಹಂತದ ಈ ಯೋಜನೆಯು ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಉದ್ದೇಶ ಹೊಂದಿದೆ. 300 ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯ ಮೀನು ಶೇಖರಣೆ, ಪ್ರದರ್ಶನ ಮತ್ತು ಶೀತಲೀಕರಣ ಸಾಧನಗಳನ್ನು ಅಳವಡಿಸಲಾಗಿದೆ, ಮತ್ಸ್ಯವಾಹಿನಿಗಳು 599 ಕೆಜಿಯಷ್ಟು ಪೇಲೋಡ್ ಸಾಮಾರ್ಥ್ಯ ಹೊಂದಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆಗೆ 3 ಜನರ ಅಗತ್ಯವಿದೆ. ಈ ವಾಹನ ಶೈತೀಕರಿಸಿದ ವಿಭಾಗಗಳೊಂದಿಗೆ ಅಳವಡಿಸಲ್ಪಟ್ಟಿದೆ. ಈ ವಾಹನ ಬ್ಯಾಟರಿಯೊಂದಿಗೆ ಚಲಿಸುತ್ತಿದ್ದು ಪರಿಸರ ಸ್ನೇಹಿಯಾಗಿದೆ.