ಕಾರ್ಕಳ, ಮಾ 26 (DaijiworldNews/DB): ಮಡಿಕೇರಿ ಕುಶಾಲನಗರದಲ್ಲಿ ಪ್ರವಾಸಿಗರಿಂದ 12 ಲಕ್ಷ ರೂ.ಗಳಿಗೆ ಅಧಿಕ ಮೌಲ್ಯದ ಚಿನ್ನಾಭರಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತ: ಕುಶಾಲನಗರದವನಾಗಿದ್ದು ಕಳೆದ ಎಂಟು ವರ್ಷಗಳಿಂದ ಕಾರ್ಕಳ ನಗರದ ಬಂಗ್ಲೆಗುಡ್ಡೆಯ 2ನೇ ವಾರ್ಡಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಖಾಸಿಂ ಎಂಬಾತ ಪ್ರಕರಣದ ಆರೋಪಿ. ಇನ್ನೊಬ್ಬ ಆರೋಪಿಯ ಹೆಸರು ತಿಳಿದು ಬಂದಿಲ್ಲ.
ರೆಂಜಾಳದ ಯುವತಿಯೊಬ್ಬಳನ್ನು ವಿವಾಹವಾಗಿ ಬಂಗ್ಲೆಗುಡ್ಡೆಯ ಮನೆಯೊಂದರಲ್ಲಿ ವಾಸವಾಗಿದ್ದ ಖಾಸಿಂ ಹಳೆ ವಾಹನವೊಂದರಲ್ಲಿ ಗುಜುರಿ ವ್ಯಾಪಾರ ಮಾಡುತ್ತಿದ್ದ. ಸಾರ್ವಜನಿಕರೊಂದಿಗೆ ಸಭ್ಯನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಕುಶಾಲನಗರದಲ್ಲಿ ಪ್ರವಾಸಿಗರ ತಂಡವೊಂದರಿಂದ 12 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಎಗರಿಸಿ ಖಾಸಿಂ ಮತ್ತು ಇನ್ನೊಬ್ಬ ಆರೋಪಿ ಪರಾರಿಯಾಗಿದ್ದರು. ಬಳಿಕ ಅದನ್ನು ಉಡುಪಿಯ ಜ್ಯುವೆಲ್ಲರಿ ಅಂಗಡಿಯೊಂದಕ್ಕೆ ಮಾರಾಟ ಮಾಡಿದ್ದ. ಇದೀಗ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಬಂಧಿಸಲಾಗಿದ್ದು, ಉಡುಪಿ ಜ್ಯುವೆಲ್ಲರಿ ಶಾಪ್ನಿಂದ ಮಾರಾಟವಾಗಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳನ್ನು ವಿಚಾರಣೆಗಾಗಿ ಕುಶಾಲನಗರಕ್ಕೆ ಕರೆದೊಯ್ಯಲಾಗಿದೆ.