ಬಂಟ್ವಾಳ, ಮಾ 25 (DaijiworldNews/HR): ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆಯಿರುವ ಕಡೆಗಳಲ್ಲಿ ಅದ್ಯತೆಯ ನೆಲೆಯಲ್ಲಿ ಲಭ್ಯ ಸಂಪನ್ಮೂಲ ಬಳಸಿಕೊಂಡು ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಂಟ್ವಾಳ ತಾಲೂಕಿನ ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಯ ಹಿನ್ನಲೆಯಲ್ಲಿ ಶನಿವಾರ ಬಂಟ್ವಾಳ ತಾ.ಪಂ.ನ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಮುಂದಿನ ಎರಡು ತಿಂಗಳಲ್ಲಿ ಮಳೆ ಬರದಿದ್ದಲ್ಲಿ ಕುಡಿಯುವ ನೀರಿಗೆ ತಾತ್ವರ ಉಂಟಾಗುವ ಸಾಧ್ಯತೆ ಇದ್ದು,ಈ ಸಂದರ್ಭದಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿ ಜೆಜೆಎಂ ಯೋಜನೆಯಲ್ಲಿ ಅಥವಾ ಬೋರ್ ವೆಲ್ ಕೊರೆದಾದರೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಬಂಟ್ವಾಳ ತಾಲೂಕಿನಲ್ಲಿ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಾಲ್ತಿಯಲ್ಲಿದೆ. ಅಂತರ್ಜಲ ಬತ್ತಿಹೋದ ಸಂದರ್ಭ ಪರ್ಯಾಯ ವ್ಯವಸ್ಥೆ ಹುಡುಕಿಕೊಳ್ಳಬೇಕು ಎಂದರು.
ಜೆಜೆಎಂ ಯೋಜನೆಯಲ್ಲಿ ಇನ್ನು ಕೂಡ ಕಾಮಗಾರಿ ಆರಂಭವಾಗದಿದ್ದರೆ ಆದ್ಯತೆಯ ನೆಲೆಯಲ್ಲಿ ಬೋರ್ ವೆಲ್ ಕೊರೆದಾದರೂ ನೀರು ಪೂರೈಸುವಂತೆ ಪಿಡಿಒಗಳಿಗೆ ಸೂಚಿಸಿದ ಸಿಇಒ ಈಗಿರುವ ಬೋರ್ ವೆಲ್ ನ್ನು ಸುಸ್ಥಿತಿಗೆ ತಂದು ನೀರು ಪೂರೈಕೆ ಮಾಡಲು ಸಾಧ್ಯವೇ ಎಂದು ಪರಿಶೀಲಿಸಿ,ಅದು ಸಂಪೂರ್ಣ ಬತ್ತಿ ಹೋಗಿದ್ದರೆ ಮಾತ್ರ ಹೊಸ ಬೋರ್ ವೆಲ್ ಕೊರೆಯಲು ಕ್ರಮಕೈಗೊಳ್ಳಬೇಕು,ಪೈಪ್ ಲೈನ್ ಗೆ ಅವಶ್ಯಕತೆಯಿದ್ದರೆ 15 ಹಣಕಾಸಿನ ಅನುದಾನವನ್ನು ಬಳಕೆ ಮಾಡಬಹುದು ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇರುವಲ್ಲಿ ನೀರಿನ ಸಮಸ್ಯೆ ಎದುರಾದರೆ ಅದು ಯೋಜನೆಯ ಅನುಷ್ಠಾನದ ವೈಫಲ್ಯವಾಗುತ್ತದೆ ಎಂದ ಸಿಇಒ ಡಾ.ಕುಮಾರ್ ಎಂದು ಹೇಳಿದರಲ್ಲದೆ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಗಬೆಟ್ಟು ಬಹುಗ್ರಾಮ ಯೋಜನೆಗೆ ಒಳಪಡುವ ಗ್ರಾಮಗಳಿಗೆ ನೀರಿಲ್ಲ ಎಂದು ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ ಹಾಗೂ ಅರಳ ಗ್ರಾಪಂ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತ ಆರ್ .ಪೂಜಾರಿ ಅವರು ಹೇಳಿದರು. ಚೆನ್ನೈತೋಡಿಯ ಸಮಸ್ಯೆಗಳ ಕುರಿತು ಭಾರತಿ ರಾಜೇಂದ್ರ ಪೂಜಾರಿ ಪ್ರಸ್ತಾಪಿಸಿದರೆ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯಲ್ಲು ಕೆಲವೆಡೆ ನೀರಿನ ಸಮಸ್ಯೆ ಇದೆ ಎಂದು ಅಧ್ಯಕ್ಷರು ಸಭೆಯ ಗಮನಸೆಳೆದರು.
ಗೋಳ್ತಮಜಲು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರೆ ಕಾಮಗಾರಿಗಳಿಂದಾಗಿ ನೀರು ಸಮಸ್ಯೆ ಉಂಟಾಗಿದೆ. ಹೈವೇ ಕಾಮಗಾರಿ ಸಂದರ್ಭ ಪೈಪ್ ಹಾಳಾದರೆ ಒಂದರಿಂದ ಎರಡು ದಿನದೊಳಗೆ ಆಗದಿದ್ದರೆ ಪಿಡಿಒ ಗಮನಕ್ಕೆ ತರಬೇಕು ಎಂದು ಸಿಇಒ ಹೇಳಿದರು. ಬಹುಗ್ರಾಮದ ಪೈಪ್ ಲೈನ್ ಗೆ ಕೂಡ ಹಾನಿಯನ್ನು ಮಾಡಲಾಗುತ್ತದೆ ಎಂದು ಮಾಣಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಹೇಳಿದರು.
ಬೋರ್ ವೆಲ್ ಬತ್ತಿ ಹೋಗಿರುವ ಒಂದು ಕಿ.ಮೀ. ವ್ಯಾಪ್ತಿಯ ಖಾಸಗಿ ಬಾವಿ, ಬೋರ್ ವೆಲ್,ತೆರೆದ ಬಾವಿಗಳ ಪಟ್ಟಿ ಮಾಡಿಕೊಳ್ಳಬೇಕು ಎಂದು ಸಿಇಒ ಸೂಚಿಸಿದರು. ಬೋರ್ವೆಲ್ ಅಳವಡಿಕೆದಾರರ ಕೊರತೆ ಕುರಿತು ಶಾಸಕ ರಾಜೇಶ್ ನಾಯ್ಕ್ ಪ್ರಸ್ತಾಪಿಸಿದರು.
ಅನುಮತಿ ಪಡೆಯದೆ ಸಭೆಗೆ ಬಾರದ ಪಿಡಿಒಗಳು ನನ್ನ ಕಚೇರಿಗೆ ಬಂದು ಭೇಟಿಯಾಗಿ ಸ್ಪಷ್ಟೀಕರಣ ನೀಡಬೇಕು ಎಂದು ಕುಮಾರ್ ಹೇಳಿದರು.