ಉಡುಪಿ, ಮಾ 25 (DaijiworldNews/HR): ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕ್ರಮದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು.
ನಗರದ ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು 40% ಸರ್ಕಾರಕ್ಕೆ ಧಿಕ್ಕಾರ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಧಿಕ್ಕಾರ, ಸುಳ್ಳುಗಾರ ಮೋದಿ ಅವರಿಗೆ ಧಿಕ್ಕಾರ ಇತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.
ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ,ರಾಹುಲ್ ಗಾಂಧಿಯವರು ಭಾರತ ಜೋಡೋ ಯಾತ್ರೆ ನಡೆಸಿದ ಬಳಿಕ ಬಿಜೆಪಿಯವರು ಭಯ ಬಿದ್ದಿದ್ದಾರೆ. ಹೇಗಾದರೂ ಮಾಡಿ ಅವರ ಧ್ವನಿ ಅಡಗಿಸಬೇಕು ಎಂಬ ಉದ್ದೇಶದಿಂದ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಕೋರ್ಟ್ ತೀರ್ಪು ಬಂದ ಕೇವಲ 24 ತಾಸಿನ ಒಳಗೆ ಅವರನ್ನು ಅನರ್ಹಗೊಳಿಸಿರುವುದರ ಹಿಂದೆ ಷಡ್ಯಂತ್ರ ಇದೆ. ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನಾಯಕರಾದ ಎಂ.ಎ ಗಪೂರ್, ರಮೇಶ್ ಕಾಂಚನ್, ಅಮೃತ್ ಶಣೈ, ಪ್ರಸಾದ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.