ಮಂಗಳೂರು, ಮಾ 21(MSP): ಇಂದಿನಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದ್ದು ರಾಜ್ಯಾದ್ಯಂತ ಒಟ್ಟು 2,847 ಪರೀಕ್ಷಾ ಕೇಂದ್ರಗಳಲ್ಲಿ 8,41,666 ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 29,097 ವಿದ್ಯಾರ್ಥಿಗಳು ನೋಂದಾಯಿಸಿದ್ದು ಅದರಲ್ಲಿ 28,705 ವಿದ್ಯಾರ್ಥಿಗಳು ಹಾಜರಾಗಿದ್ರೆ, 392 ಮಂದಿ ಗೈರುಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. 95 ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಖಾಸಗಿ ಅಭ್ಯರ್ಥಿಗಳಿಗೆ 5 ಕೇಂದ್ರಗಳನ್ನು ನಿಯೋಜಿಸಲಾಗಿತ್ತು.
ಗುರುವಾರ ಪ್ರಥಮ ಭಾಷೆ ವಿಷಯಗಳಾದ ಕನ್ನಡ, ತೆಲುಗು, ಹಿಂದಿ , ಮರಾಠಿ , ತಮಿಳು, ತೆಲುಗು , ಉರ್ದು , ಇಂಗ್ಲೀಷ್ ಮತ್ತು ಸಂಸ್ಕೃತ ಪರೀಕ್ಷೆ ನಡೆದಿದೆ. ಬೆಳಗ್ಗೆ 9.30 ರಿಂದ ಪರೀಕ್ಷೆ ಆರಂಭಗೊಂಡಿದ್ದು, 12.30ಕ್ಕೆ ಪರೀಕ್ಷೆ ಕೊನೆಗೊಂಡಿದೆ.
ಇನ್ನು ಮೊದಲ ದಿನದ ಪರೀಕ್ಷೆ ನಿರಾಂತಕವಾಗಿ ಸಾಗಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.