ಸುಳ್ಯ, ಮಾ 25 (DaijiworldNews/HR): ಮಣ್ಣಿನಡಿ ಸಿಲುಕಿ ಮೃತಪಟ್ಟವರನ್ನು ಗದಗ ಮೂಲದ ಸೂಮಶೇಖರ್(45) ಹಾಗೂ ಆತನ ಪತ್ನಿ ಶಾಂತಾ(40) ಮತ್ತು ಮತ್ತೂರ್ವ ಉತ್ತರ ಕನ್ನಡ ಮೂಲದ ಯುವಕ ಎಂದು ತಿಳಿದುಬಂದಿದೆ.
ಇದೀಗ ಇವರ ಶವವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ, ಸೂಮಶೇಖರ್ ಹಾಗೂ ಶಾಂತಾ ಸುಳ್ಯ ಜಟ್ಟಿಪಳ್ಳದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆಂದು ತಿಳಿದು ಬಂದಿದ್ದು ಮತ್ತೂರ್ವ ಯುವಕನ ವಿವರ ಇನ್ನು ಲಭ್ಯವಾಗಿಲ್ಲ, ಈ ಕೆಲಸವನ್ನು ಸುಳ್ಯದ ವಿಜಯ ಇಂಜಿನಿಯರ್ ರಿಗೆ ವಹಿಸಿಕೊಡಲಾಗಿತ್ತು ಅವರು ಕಳೆದ ಒಂದು ವಾರದ ಹಿಂದೆ ಕಾಮಗಾರಿ ಆರಂಭಿಸಿದ್ದರು, ಜೆಸಿಬಿ ಕೆಲಸ ನಡೆದು ಗೋಡೆಗೆ ಅಡ್ಡಲಾಗಿ ಪಿಲ್ಲರ್ ಹಾಕಿ ಕಾಂಕ್ರೀಟ್ ಗೋಡೆ ನಿರ್ಮಾಣಕ್ಕೆ ಸಿದ್ದತೆಗಳು ನಡೆದಿತ್ತು. ಮತ್ತು ಕೂಲಿಯಾಳುಗಳನ್ನಾಗಿ ರಸ್ತೆ ಬದಿ ಕೆಲಸ ಅರಿಸಿ ಬರುವ ಉತ್ತರಕನ್ನಡ ಮೂಲದವರನ್ನು ಕರೆದೊಯ್ಯಲಾಗುತ್ತಿತ್ತು ಎಂದು ಹೇಳಲಾಗಿದೆ.
ಊಟ ಮುಗಿಸಿ ಕುಳಿತ್ತಿದ್ದವರು ಏಳು ಮಂದಿ
ಎಂದಿನಂತೆ ಕೆಲಸ ಮುಗಿಸಿ ಸುಮಾರು ಏಳು ಜನರ ತಂಡ ಕುಳಿತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಒಮ್ಮಿಂದೊಮ್ಮೆಲೆ ಮಣ್ಣು ಕುಸಿಯುವಾಗ ಉಳಿದ ನಾಲ್ವರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದರು. ಆದರೆ ಮೃತಪಟ್ಟ ಮೂವರು ಓಡುವ ರಭಸಕ್ಕೆ ಪಿಲ್ಲರ್ ಗಾಗಿ ತೆಗೆದ ಗುಂಡಿಗೆ ಬಿದ್ದು ಮೇಲೇಳಲಾಗದೆ ಅಸಾಹಯಕರಾದರು.
ಇಲ್ಲೆ ಪಕ್ಕದಲ್ಲಿ ಅಶ್ರಪ್ ಎಂಬವರು ಅನಧಿಕೃತವಾಗಿ ಮಣ್ಣು ಅಗೆದಿದ್ದರು ಇದರಿಂದ ಮೇಲಿನ ಮನೆಗಳಿಗೂ ಅಪಾಯವಿತ್ತು, ಈ ಬಗ್ಗೆ ನಮಗೆ ಮಾಹಿತಿ ಸಿಕ್ಕ ಹಿನ್ನಲೆ ನಗರ ಪಂಚಾಯತ್ ವತಿಯಿಂದ ಅವರಿಗೆ ನೊಟೀಸ್ ಮಾಡಿ ಸ್ಥಳ ಪರೀಶಿಲನೆಗೆ ತೆರಳಿದ್ದರು.ಇದೇ ಸಂದರ್ಭ ಕೂಗಳತೆ ದೂರದಲ್ಲಿ ಈ ದುರ್ಘಟನೆ ನಡೆದಿತ್ತು.
ಇನ್ನು ಸುಮಾರು 40 ಅಡಿಗೂ ಹೆಚ್ಚಿನ ಎತ್ತರದ ಬರೆಯಿಂದ ಮಣ್ಣು ತೆಗೆಯಲು ಪರವಾನಿಗೆ ಬೇಕಾಗುತ್ತದೆ. ಆದರೆ ಮನೆ ಮಾಲಿಕರಾಗಲಿ ಇಂಜಿನಿಯರ್ ಆಗಲಿ ನಗರ ಪಂಚಾಯತ್ ಪರವಾನಿಗೆ ಪಡೆದಿಲ್ಲ ಎಂದು ತಿಳಿದುಬಂದಿದೆ,ಇಂತಹ ಅಪಾಯಕಾರಿ ಕಾಮಗಾರಿಯನ್ನು ಪಂಚಾಯತ್ ಪರವಾನಿಗೆ ಪಡೆಯದೆ ಮಾಡಿರುವುದು ಅಕ್ಷಮ್ಯ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಘಟನೆ ಘಟಿಸಿದ ತಕ್ಷಣ ಕಾರ್ಯೋನ್ಮುಖರಾದ ನ ಪಂ ಸದಸ್ಯ ಉಮ್ಮರ್ ಹಾಗೂ ತಂಡ ಹಾರೆಯನ್ನು ಬಳಸಿ ಕಾರ್ಯಾಚರಣೆಗೆ ಮುಂದಾಗಿದ್ದರು.ಆದರೆ ಮಣ್ಣು ಅಪಾರ ಪ್ರಮಾಣದಲ್ಲಿ ಕುಸಿದ ಕಾರಣ ಹಾಗೂ ಮಣ್ಣಿನಡಿ ಸಿಲುಕಿಕೊಂಡವರು ಆಳದಲ್ಲಿದ್ದ ಕಾರಣ ಜೆಸಿಬಿ ಅನಿವಾರ್ಯತೆಯಾಯಿತು. ಗುತ್ತಿಗೆದಾರ ಹಂಸ ಎನ್ನವವರ ಜೆಸಿಬಿಯಲ್ಲಿ ಕಾರ್ಯಚರಣೆ ನಡೆಸಲಾಯಿತು, ಅಗ್ನಿಶಾಮಕದಳ, ಪೋಲಿಸರು ಹಾಗೂ ಸ್ಥಳೀಯ ಯುವಕರು ಕಾರ್ಯಚರಣೆ ನಡೆಸಿ ಶವ ಮೇಲಕ್ಕೆತ್ತುವ ಕೆಲಸ ನಡೆಸಲಾಯಿತು.ಸ್ಥಳದಲ್ಲಿ ಸಚಿವ ಅಂಗಾರ, ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್, ನ ಪಂ ಸದಸ್ಯರು, ಸೇರಿದಂತೆ ನೂರಾರು ಮಂದಿ ಆಗಮಿಸಿದ್ದರು.