ಉಡುಪಿ, ಮಾ 25 (DaijiworldNews/DB): ದಿರಾಮ್ ಕರೆನ್ಸಿಯನ್ನು ರೂಪಾಯಿ ಕರೆನ್ಸಿಗೆ ವಿನಿಮಯ ಮಾಡಿಕೊಡುವ ನೆಪದಲ್ಲಿ ಇಬ್ಬರು ವ್ಯಕ್ತಿಗಳಿಗೆ ಅಪರಿಚಿತರು ಒಟ್ಟು 8 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಮೊದಲ ಪ್ರಕರಣದಲ್ಲಿ ಮಂಗಳೂರಿನ ಟ್ಯಾಕ್ಸಿ ಚಾಲಕ ಮೊಹಮದ್ ತೌಫೀಕ್ (43) ಅವರು ಮಾರ್ಚ್ 7ರಂದು ಬೆಳಗ್ಗೆ 11 ಗಂಟೆಗೆ ಕಾರ್ಕಳ ಪೇಟೆಯ ಹೊಟೇಲ್ ಬಳಿ ತಮ್ಮ ಪ್ಯಾಸೆಂಜರ್ ಸೂಚನೆಯ ಮೇರೆಗೆ ಕಾಯುತ್ತಾ ನಿಂತಿದ್ದಾಗ ಅಪರಿಚಿತನೊಬ್ಬ ಮೊಹಮದ್ ತೌಫೀಕ್ ಅವರ ಬಳಿ ಬಂದು ಹಿಂದಿಯಲ್ಲಿ ಮಾತನಾಡತೊಡಗಿದೆ. ಆತನ ಬಳಿಯಿದ್ದ ಗಲ್ಪ್ ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್ ಮೌಲ್ಯದ ಕರೆನ್ಸಿಯ ಒಂದು ನೋಟನ್ನು ತೋರಿಸಿ, ಇದನ್ನು ಎಲ್ಲಿ ಎಕ್ಸ್ಚೇಂಜ್ ಮಾಡುತ್ತಾರೆ ಎಂದು ಕೇಳಿ ತೌಫೀಕ್ ಬಳಿ ವಿಚಾರಿಸಿದ್ದು, ಆ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರೂ ಕೂಡಾ ಆ ನೋಟನ್ನು ಮೊಹಮದ್ ತೌಫೀಕ್ ಅವರಿಗೆ ನೀಡಿದ್ದ, ಅಲ್ಲದೇ ತಮ್ಮ ಆಂಟಿ ಬಳಿ ಇನ್ನೂ ಇದೇ ರೀತಿಯ ತುಂಬಾ ದಿರಮ್ಸ್ ಕರೆನ್ಸಿ ಇದೆ. ಬೇಕಾದಲ್ಲಿ ಕಡಿಮೆ ಮೌಲ್ಯಕ್ಕೆ ಕೊಡಿಸುತ್ತೇನೆ ಎಂದು ಹೇಳಿ ಮೊಹಮದ್ ತೌಫೀಕ್ ಅವರನ್ನು ಪದೇ ಪದೇ ಸಂಪರ್ಕಿಸಿದ್ದ. ಮಾರ್ಚ್ 11ರಂದು ಬೆಳಗ್ಗೆ ಸುಮಾರು10.30ರ ವೇಳೆಗೆ ಆತ ಇತರ ಇಬ್ಬರು ಆರೋಪಿಗಳೊಂದಿಗೆ ಸಾಲಿಗ್ರಾಮ ಬಸ್ ನಿಲ್ದಾಣದ ಬಳಿಯ ಸರ್ವಿಸ್ ರಸ್ತೆಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿದ್ದ 100 ದಿರಮ್ಸ್ ಮೌಲ್ಯದ ಕರೆನ್ಸಿಯ ನೋಟಿನ ಕಟ್ಟುಗಳನ್ನು ತೋರಿಸಿ, ಅದರಲ್ಲಿ ದಿರಮ್ಸ್ ಕರೆನ್ಸಿಯ 900 ನೋಟುಗಳು ಇದೆ ಎಂಬುದಾಗಿ ತೌಫೀಕ್ರನ್ನು ನಂಬಿಸಿದ್ದ.
3 ಜನ ಆರೋಪಿಗಳು ಮಾರ್ಚ್ 7ರಿಂದ ಮಾರ್ಚ್ 14ರವರೆಗೆ ನಾನಾ ರೀತಿಯಲ್ಲಿ ನಾಟಕವಾಡಿ, ಮೊಹಮದ್ ತೌಫೀಕ್ ಅವರಿಗೆ ವಂಚಿಸುವ ದುರುದ್ದೇಶದಿಂದ ಮಾರ್ಚ್ 14ರಂದು ಮಧ್ಯಾಹ್ನ 1.15ಕ್ಕೆ ಕೆಂಪು ಬಣ್ಣದ ಚೀಲದಲ್ಲಿ ದಿನಪತ್ರಿಕೆ ಹಾಗೂ ಸೋಪು ಇಟ್ಟು ಪ್ಯಾಕ್ಮಾಡಿ ಮೂರ್ನಾಲ್ಕು ಬಟ್ಟೆಯಿಂದ ಗಟ್ಟಿಯಾಗಿ ಗಂಟು ಹಾಕಿ, ಅದನ್ನು ತೋರಿಸಿ ಅದರಲ್ಲಿ 100 ದಿರಮ್ಸ್ ಮೌಲ್ಯದ 900 ಕರೆನ್ಸಿ ನೋಟುಗಳು ಇವೆ ಎಂಬುದಾಗಿ ನಂಬಿಸಿದ್ದರು. ಬಳಿಕ ತೌಫೀಕ್ ಅವರು ಆರೋಪಿಗಳು ನೀಡಿದ ಚೀಲಿದಲ್ಲಿದ್ದ ಸ್ವತ್ತನ್ನು ಪರಿಶೀಲಿಸುವ ವೇಳೆ ಅವರ ಕೈಯಲ್ಲಿದ್ದ ಆರೂವರೆ ಲಕ್ಷ ರೂಪಾಯಿ ಹಣದ ಚೀಲವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಪ್ರತ್ಯೇಕ ಪ್ರಕರಣದಲ್ಲಿ ಕುಂದಾಪುರದ ಅಹಮ್ಮದ್ ಶರ್ಪೂದ್ದೀನ್ (46) ಅವರು ಕುಂದಾಪುರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವಾಗ ಆರೋಪಿಗಳಲ್ಲಿ ಒಬ್ಬ ಅವರ ಬಳಿ ಬಂದು ಒಂದು ಬರ್ಮುಡ ಚಡ್ಡಿಯನ್ನು ಖರೀದಿ ಮಾಡಿ ಹಣ ನೀಡಿ, ಬಳಿಕ ಆತನ ಪರ್ಸಿನಿಂದ ದುಬಾಯಿ ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್ ಮೌಲ್ಯದ ಕರೆನ್ಸಿ ನೋಟನ್ನು ತೋರಿಸಿ, ಇದನ್ನು ಎಲ್ಲಿ ಎಕ್ಸ್ಚೇಂಜ್ ಮಾಡುತ್ತಾರೆ ಎಂದು ಕೇಳಿ ವಿಚಾರಿಸಿದ್ದಾನೆ. ಅಹಮ್ಮದ್ ಶರ್ಪೂದ್ದೀನ್ ಅವರು ಕನಿಕರದಿಂದ 100 ದಿರಮ್ಸ್ ಮೌಲ್ಯಕ್ಕೆ ಅವರ ಬಳಿಯಿದ್ದ 500 ರೂಪಾಯಿಯನ್ನು ಕೊಟ್ಟಿದ್ದು. ಆಗ ಆತನು , “ನನ್ನ ಬಳಿ ಇನ್ನೂ ಇದೇ ರೀತಿಯ ತುಂಬಾ ದಿರಮ್ಸ್ ಕರೆನ್ಸಿ ಇದೆ. ಬೇಕಾದಲ್ಲಿ ನೋಡಿ, ಕಡಿಮೆ ಮೌಲ್ಯಕ್ಕೆ ಕೊಡುತ್ತೇನೆ ಎಂದು ಹೇಳಿ ಅಹಮ್ಮದ್ ಶರ್ಪೂದ್ದೀನ್ ಅವರ ಮೊಬೈಲ್ ನಂಬರ್ ಪಡೆದಿದ್ದಾನೆ. ನಂತರ ಅದೇ ಆರೋಪಿ ಕರೆ ಮಾಡಿ ನನ್ನ ಬಳಿಯಿದ್ದ ದಿರಮ್ಸ್ ಕರೆನ್ಸಿ ನೋಡಲು ಬರ್ತಿರಾ, ಎಂದು ಹೇಳಿ ಹಲವಾರು ಬಾರಿ ಸಮಯ ಹಾಗೂ ಸ್ಥಳವನ್ನು ಬದಲಿಸಿ ಅದಕ್ಕೆ ಸಮಜಾಯಿಷಿ ನೀಡಿ ಕೊನೆಗೆ ಬ್ರಹ್ಮಾವರಕ್ಕೆ ದಿರಮ್ಸ್ ಕರೆನ್ಸಿ ನೋಡಲು ಬರ್ತಿರಲ್ವಾ ಎಂದು ಹೇಳಿದ್ದಾನೆ.
ಅದರಂತೆ ಮಾರ್ಚ್ 19ರಂದು ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ಅಹಮ್ಮದ್ ಶರ್ಪೂದ್ದೀನ್ ಅವರು ಒಂದೂವರೆ ಲಕ್ಷ ರೂಪಾಯಿ ಹಣ ಹಿಡಿದುಕೊಂಡು ಬ್ರಹ್ಮಾವರ ಬಸ್ ಸ್ಟ್ಯಾಂಡ್ ಬಳಿ ಬಂದಾಗ ಆರೋಪಿಯು ಇನ್ನೊಬ್ಬ ಆರೋಪಿಯೊಂದಿಗೆ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಲ್ಲಿ ಬಂದಿದ್ದ. ಅವರು ಅಹಮ್ಮದ್ ಶರ್ಪೂದ್ದೀನ್ ವರಲ್ಲಿ ಇಲ್ಲಿ ವ್ಯವಹಾರ ಮಾಡುವುದು ಬೇಡ, ಸ್ವಲ್ಪ ಮುಂದೆ ಹೋಗುವ ಎಂಬುದಾಗಿ ಹೇಳಿ, ಸ್ವಲ್ಪ ಮುಂದೆ ಮೋಟಾರ್ ಸೈಕಲ್ ನಿಲ್ಲಿಸಿದಾಗ, ಇನ್ನೊಬ್ಬ ಆರೋಪಿತೆ ಕೈಯಲ್ಲಿ ಒಂದು ಹಸಿರು ಬಣ್ಣದ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಬಂದಿದ್ದಾನೆ. ಈ ವೇಳೆ ಅಹಮ್ಮದ್ ಶರ್ಪೂದ್ದೀನ್ ಅವರು ಮೂವರು ಆರೋಪಿಗಳ ಜೊತೆಯಲ್ಲಿ ಮಾತನಾಡಿ, ಆರೋಪಿಗಳು ದುಬಾಯಿ ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್ ಮೌಲ್ಯದ 900 ನೋಟುಗಳು ಇದೆ ಎಂಬುದಾಗಿ ಹೇಳಿದ್ದು, ಅಹಮ್ಮದ್ ಶರ್ಪೂದ್ದೀನ್ ಅವರ ಬಳಿಯಿದ್ದ ಹಣಕ್ಕೆ ದಿರಮ್ಸ್ ಕೊಡುವುದಾಗಿ ಒಪ್ಪಿ, ಕೈಯಲ್ಲಿದ್ದ ಹಸಿರು ಬಣ್ಣದ ಪ್ಯಾಕ್ ಮಾಡಿದ ಚೀಲವನ್ನು ಇವರಿಗೆ ಕೊಟ್ಟಿದ್ದಾರೆ. ಇದರಲ್ಲಿ ದಿರಮ್ಸ್ ಇದೆ ಎಂದು ಹೇಳಿ ಅಹಮ್ಮದ್ ಶರ್ಪೂದ್ದೀನ್ ಅವರು ಪರಿಶೀಲಿಸುವ ಮೊದಲೇ ಆರೋಪಿಗಳು ಇವರ ಕೈಯಲ್ಲಿದ್ದ ಒಂದೂವರೆ ಲಕ್ಷ ರೂಪಾಯಿ ಹಣದ ಚೀಲವನ್ನು ಎಳೆದುಕೊಂಡು, ಮೂವರು ಆರೋಪಿಗಳು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿದ್ದಾರೆ.
ನಂತರ ಅಹಮ್ಮದ್ ಶರ್ಪೂದ್ದೀನ್ ರವರು ಅವರಿಗೆ ನೀಡಿದ ಚೀಲವನ್ನು ತೆರೆದು ನೋಡಿದಾಗ, ಅದರಲ್ಲಿ ದಿನಪತ್ರಿಕೆಯ ಹಾಳೆಗಳನ್ನು ಕಟ್ಟು ಮಾಡಿ ಮತ್ತು ನೋಟನ್ನು ಸೇರಿಸಿ ಇಟ್ಟು, ಪ್ಯಾಕ್ ಮಾಡಿ ಬಟ್ಟೆಯಿಂದ ಸುತ್ತಿ ಗಂಟು ಕಟ್ಟಿ ಇಡಲಾಗಿತ್ತು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ಧಾಖಲಾಗಿದೆ