ಉಡುಪಿ, ಮಾ 25 (DaijiworldNews/MS): ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಉಡುಪಿಯ 3 ಕ್ಚೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಆದರೆ ಉಡುಪಿ ಜಿಲ್ಲೆಯ ಪ್ರಮುಖ ಎರಡು ಹೈ ಪ್ರೊಫೈಲ್ ಕ್ಷೇತ್ರಗಳಾದ ಉಡುಪಿ ಮತ್ತು ಕಾರ್ಕಳ ಕ್ಷೇತ್ರಗಳಿಗೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆ ಮಾಡದಿರುವುದು ಕುತೂಹಲ ಕೆರಳಿಸಿದೆ.
ಉಡುಪಿಯಲ್ಲಿ 7 ಮಂದಿ ಟಿಕೆಟ್ ಆಕಾಂಕ್ಷಿಗಳು 2 ಲಕ್ಷ ರೂಪಾಯಿ ಹಣವನ್ನು ಕಟ್ಟಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಹಲವರು ಈಗಾಗಲೇ ಫೀಲ್ಡಿಗೆ ಕೂಡಾ ಇಳಿದಿದ್ದು, ಮೂಲಗಳ ಪ್ರಕಾರ ಕಾಂಗ್ರೆಸ್ ಹಿರಿಯ ನಾಯಕರು ಯುವ ನಾಯಕ ಒರ್ವರಿಗೆ ಟಿಕೆಟ್ ನೀಡುವ ಒಲವನ್ನು ಹೊಂದಿದ್ದಾರೆ ಎನ್ನಲಾಗಿದೆ. 7 ಮಂದಿ ಅರ್ಜಿ ಹಾಕಿದವರಲ್ಲಿ ಅಂತಿಮವಾಗಿ ರೇಸ್ ನಲ್ಲಿ ಕೇವಲ ಮೂವರು ಉಳಿದಿದ್ದಾರೆ ಎನ್ನಲಾಗಿದೆ.
ಕಾರ್ಕಳದಲ್ಲಿ ನಾಲ್ಕು ಮಂದಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಕಾರ್ಕಳ ಹೈ ಪ್ರೊಫೈಲ್ ಕ್ಷೇತ್ರವಾಗಿದ್ದು ಇಲ್ಲಿ ಅಭ್ಯರ್ಥಿ ಯನ್ನು ಫೈನಲ್ ಮಾಡುವುದು ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದ ನಾಲ್ವರನ್ನು ಹೊರತುಪಡಿಸಿ ಬೇರೆಯದೇ ವ್ಯಕ್ತಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಉತ್ಸುಕವಾಗಿದೆ.
ಉಡುಪಿ ಮತ್ತು ಕಾರ್ಕಳ ದ ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್ ಎರಡು ಅಥವಾ ಮೂರನೇ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ.
ಮೊದಲ ಪಟ್ಟಿಯಲ್ಲಿ ನಿರೀಕ್ಷೆಯಂತೆ ಕಾಪುವಿಗೆ ವಿನಯ್ ಕುಮಾರ್ ಸೊರಕೆ, ಬೈಂದೂರು ಗೋಪಾಲ ಪೂಜಾರಿ ಮತ್ತು ಕುಂದಾಪುರಕ್ಕೆ ದಿನೇಶ್ ಹೆಗ್ಡೆ ಮೊಳಹಳ್ಳಿಗೆ ಟಿಕೆಟ್ ಘೋಷಿಸಲಾಗಿದೆ. ಇವರೆಲ್ಲರೂ ಕೂಡಾ ಈಗಾಗಲೇ ಪ್ರಚಾರ ಕಾರ್ಯಕ್ಕೆ ದುಮುಕಿದ್ದಾರೆ.