ಮಂಗಳೂರು, ಮಾ 25 (DaijiworldNews/MS): ಪ್ರವಾಸೋದ್ಯಮ, ಉದ್ಯಮ, ಶಿಕ್ಷಣ ಸಂಸ್ಥೆಗಳನ್ನೊಂಡ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡು ಪ್ರಬಲ್ಯ ಸಾಧಿಸಿತ್ತು.
2013ರಲ್ಲಿ ಕಾಂಗ್ರೆಸ್ನ ಜೆ.ಆರ್. ಲೋಬೊ ಜಯ ಗಳಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಗೆಲುವು ಸಾಧಿಸಿದ್ದರು. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ನ ಬಿ.ಎ.ಮೊಹಿಯುದ್ದೀನ್ ಬಾವ ಅವರ ವಿರುದ್ಧ ಬಿಜೆಪಿಯ ಡಾ.ಭರತ್ ಶೆಟ್ಟಿ ವೈ. ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದಿದ್ದರು.
ಆದರೆ ಸಾಕಷ್ಟು ಕುತೂಹಲ ಕೆರಳಿಸಿದ್ದ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿದ್ದು ಇದರಲ್ಲಿ ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಟಿಕೆಟ್ ರಿಲೀಸ್ ಮಾಡಿಲ್ಲ. ನಿರೀಕ್ಷೆಯಂತೆ ಉಳ್ಳಾಲ ಯು.ಟಿ ಖಾದರ್ ಮೂಡುಬಿದಿರೆ ಮಿಥುನ್ ರೈ ಹಾಗೂ ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈಗೆ ಟಿಕೆಟ್ ಲಭ್ಯವಾಗಿದೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪದ್ಮರಾಜ್. ಆರ್., ಜೆ.ಆರ್.ಲೋಬೊ, ಐವನ್ ಡಿಸೋಜ,(ಪ್ರಬಲ ಆಕಾಂಕ್ಷಿಗಳು) ಶಾಲೆಟ್ ಪಿಂಟೊ, ಲಾರೆನ್ಸ್ ಡಿಸೋಜ, ಮೆರಿಲ್ ರೇಗೊ, ವಿಶ್ವಾಸ್ ಕುಮಾರ್ ದಾಸ್ ಟಿಕೆಟ್ ಬಯಸಿದ್ದಾರೆ.
ಮಂಗಳೂರು ಉತ್ತರದಲ್ಲಿ ಮೊಹಿಯುದ್ದೀನ್, ಇನಾಯಕ್ ಅಲಿ, ಪ್ರತಿಭಾ ಕುಳಾಯಿ,ಕವಿತಾ ಸನಿಲ್ ಆಕಾಂಕ್ಷಿಗಳಾಗಿದ್ದಾರೆ.
ಹೀಗಾಗಿ ಮಂಗಳೂರಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ನೀಡುತ್ತದೆ ಎನ್ನುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.