ಮಂಗಳೂರು, ಮಾ 24 (DaijiworldNews/SM): ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಶಾಕ್ ನ ಮೇಲೆ ಶಾಕ್ ನೀಡಲಾಗಿದೆ. ಲೋಕಸಭಾ ಸದಸ್ಯತ್ವದಿಂದ ಅನರ್ಹ ಗೊಳಿಸಿದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. ಸರಕಾರಿ ಯಂತ್ರವನ್ನು ದುರುಪಯೋಗಪಡಿಸುತ್ತಿರುವ ಬಿಜೆಪಿಯ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದ ಲಾಲ್ಭಾಗ್ನ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಯಿತು.
ಬಿಜೆಪಿಗೆ ಧಿಕ್ಕಾರ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ವಿರುದ್ಧ ಆಕ್ರೋಶ ವ್ಯಕಪಡಿಸಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಮಾತನಾಡಿ, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಸತ್ಯ ನುಡಿದಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ವಿಶ್ವಾಸ್ದಾಸ್, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.