ಹರಿಪ್ರಸಾದ್ ನಂದಳಿಕೆ
ಬೆಳ್ಮಣ್, ಮಾ 24 (DaijiworldNews/MS): ಪ್ರತೀ ವರ್ಷವೂ ಪ್ರಚಾರದ ವಿಚಾರದಲ್ಲಿ ವಿಭಿನ್ನತೆಯನ್ನು ಹೊಂದಿರುವ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಿರಿ ಜಾತ್ರೆಯ ಪ್ರಚಾರ ಫಲಕ ಈ ಬಾರಿ ಮತ್ತಷ್ಟು ವಿಶೇಷತೆಯಿಂದ ಕೂಡಿದ್ದು ಜಾಗೃತಿಯನ್ನು ಮೂಡಿಸುವಂತಿದೆ.
ನಿತ್ಯ ಏರುತ್ತಿರುವ ತಾಪಮಾನದಲ್ಲಿ ಪ್ರಾಣಿ,ಪಕ್ಷಿಗಳು ಕುಡಿಯಲು ನೀರು ಸಿಗದೆ ಪರದಾಡುವುದನ್ನು ಕಾಣುತ್ತೇವೆ. ಈ ಹಿನ್ನಲೆಯಲ್ಲಿ ನಂದಳಿಕೆಯ ಸಿರಿ ಜಾತ್ರೆ ಪ್ರಚಾರದ ಜೊತೆಯಲ್ಲಿ ಪಕ್ಷಿ ಸಂಕುಲಕ್ಕೆ ನೀರುಣಿಸಲು ಮುಂದಾಗಿದೆ. ಸುಡು ಬಿಸಿಲಿನಿಂದ ನದಿ, ಕೆರೆ ತೊರೆಗಳು ಸಂಪೂರ್ಣ ಬತ್ತಿ ಹೋಗುತ್ತಿದ್ದು ಬಿಸಿಲಲ್ಲಿ ಬಾಯಾರಿ ಬರುವ ಪಕ್ಷಿಗಳಿಗೆ ನೀರು ಸಿಗದೆ ಪರದಾಡುತ್ತವೆ ಅಂತಹ ಪ್ರಾಣಿ ಪಕ್ಷಿಗಳಿಗೆ ಬಾಯಾರಿಕೆಗೆ ನೀರು ನೀಡುವುದರ ಜೊತೆಯಲ್ಲಿ ಜಾತ್ರೆಯ ಪ್ರಚಾರಕ್ಕೆ ಇಳಿದ ನಂದಳಿಕೆ ಸಿರಿ ಜಾತ್ರೆ ಒಂದು ರೀತಿಯಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಮುಂದಾಗಿದೆ.
ಪ್ರಚಾರ ಫಲಕದಲ್ಲಿ ಏನಿದೆ :
ಈ ಹಿಂದೆ ಅಂಚೆ ಕಾರ್ಡ್, ಮಾವಿನ ಎಲೆ, ಛತ್ರಿ, ಗೋಣಿಚೀಲ ಹಾಗೂ ಮೈಲಿಗಲ್ಲು, ಮತ್ತು ಮಾಸ್ಕ್, ಫೋಟೋ ಫ್ರೇಮ್ ಪ್ರಚಾರದ ಮೂಲಕ ಎಲ್ಲರ ಮನಗೆದ್ದ ನಂದಳಿಕೆ ಸಿರಿ ಜಾತ್ರೆಗೆ ಈ ಬಾರಿ ಪಕ್ಷಿಗಳಿಗೆ ನೀರು ನೀಡುವ ಮಣ್ಣಿನ ಪಾತ್ರೆಯನ್ನು ಅಳವಡಿಸುವ ಮೂಲಕ ಪ್ರಚಾರ ಬಾರಿ ಪ್ರಶಂಶೆಯನ್ನು ತಂದುಕೊಡುತ್ತಿದೆ. ಕಂಬದ ಮಾದರಿಯಲ್ಲಿರುವ ರಟ್ಟಿನ ಬಾಕ್ಸ್ ನ ಮೇಲೆ ಮಣ್ಣಿನ ಪಾತ್ರೆ(ತುಳುವಿನ ಗದ್ದವು) ಯಲ್ಲಿ ನೀರು ಇಟ್ಟು ಪ್ರಚಾರದ ಜತೆ ಪರಿಸರದ ಹಕ್ಕಿಗಳ ಬಾಯಾರಿಕೆ ತಣಿಸುವ ಕಾಯಕನ್ನು ನಡೆಸಲಿದ್ದಾರೆ. ರಟ್ಟು ಶೀಟಿನ ನಾಲ್ಕು ಬದಿಯಲ್ಲಿ ನಂದಳಿಕೆ ಸಿರಿ ಜಾತ್ರೆ ಎಂದು ಬರೆದಿದ್ದು ಎಪ್ರಿಲ್ 06 ಗುರುವಾರ ಎಂದು ಜಾತ್ರೆಯ ದಿನಾಂಕವನ್ನು ನಮೂದಿಸಲಾಗಿದೆ. ಜೊತೆಗೆ ರಟ್ಟಿನ ಮೇಲ್ಬಾಗದಲ್ಲಿ ಮಣ್ಣಿನ ಪಾತ್ರೆಯನ್ನು ಇಟ್ಟು ಅದಕ್ಕೆ ನೀರು ಹಾಕಲಾಗುತ್ತದೆ. ಬಾಯರಿ ಬರುವ ಪಕ್ಷಿಗಳು ನೀರು ಕುಡಿಯಲು ಇದು ಸಹಕಾರಿಯಾಗಿದೆ. ಸಿದ್ಧಾಪುರದಲ್ಲಿ ತಯಾರಿಸಲಾದ ಮಣ್ಣಿನ ಪಾತ್ರೆ ಹಾಗೂ ಬೆಂಗಳೂರಿನಲ್ಲಿ ತಯಾರಿಸಿ ನಂದಳಿಕೆ ಸಿರಿ ಜಾತ್ರೆಯ ಬಗ್ಗೆ ಮುದ್ರಿಸಲಾದ ಪೇಪರ್ ಬಾಕ್ಸ್ಗೆ ಒಂದಕ್ಕೆ ಸುಮಾರು 120 ರೂ.ವೆಚ್ಚವಾಗಿದ್ದು 1500ರಷ್ಟು ಪ್ರತಿಕೃತಿಗಳನ್ನು ತಯಾರಿಸಲಾಗಿದೆ.
ಈ ಬಾರಿಯ ಪ್ರಚಾರದ ಫಲಕ ದ.ಕನ್ನಡ ಹಾಗು ಉಡುಪಿ ಜಿಲ್ಲೆಯೆಲ್ಲೆಡೆ, ಧರ್ಮಸ್ಥಳ,ಚಾರ್ಮಾಡಿ,ಉಜಿರೆ,ಬಂಟ್ವಾಳ,ಉಡುಪಿ, ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಮಲೆನಾಡಿನಲ್ಲೂ ಈ ಹಿಂದಿನಂತೆ ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸದೇ ಮನೆಯ ಮುಂಭಾಗದಲ್ಲಿ, ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಅವರವರ ಸುಪರ್ದಿಯಲ್ಲಿ ಜವಾಬ್ದಾರಿ ನೀಡಿ ಅಳವಡಿಸಲಾಗುವುದು. ಅವರೇ ಈ ಮಣ್ಣಿನ ಪಾತ್ರೆಗೆ ಪಕ್ಷಿಗಳಿಗಾಗಿ ನಿತ್ಯ ನೀರೆರೆಯಲಿದ್ದಾರೆ ಆ ಮೂಲಕ ಪ್ರಯಾಣಿಕರ ಹಾಗೂ ಭಕ್ತರ ಮನ ಸೆಳೆಯಲಿದೆ.
ನಂದಳಿಕೆ ಸಿರಿ ಜಾತ್ರೆ ಎಂದರೆ ಇಡೀ ನಾಡಿಗೆ ನಡೆ ಸಂಭ್ರಮ, ಆದಿ ಆಲಡೆ, ಸಿರಿ ಕ್ಷೇತ್ರ, ಸಿರಿಗಳ ಮೂಲ ಕ್ಷೇತ್ರ, ನಾಲ್ಕು ಸ್ಥಾನ ನಂದಳಿಕೆ ಹೀಗೆ ನಾನಾ ರೀತಿಯಿಂದಲೂ ಗುರುತಿಸಿಕೊಂಡ ನಂದಳಿಕೆ ಮಹಾಲಿಂಗೇಶ್ವರ ದೇವಾಲಯದ ಜಾತ್ರೆಯು ಪ್ರತೀ ಬಾರಿ ಹೊಸತನದ ಪ್ರಚಾರದ ಪರಿಕಲ್ಪನೆಯನ್ನು ಹೊತ್ತು ಶಾಭಷ್ ಗಿರಿ ಪಡೆಯುತ್ತಿದೆ. ಪ್ರತೀ ವರ್ಷ ವಿಭಿನ್ನ ಪರಿಕಲ್ಪನೆಯ ಪ್ರಚಾರ ಫಲಕದ ರೂವಾರಿ ನಂದಳಿಕೆ ಚಾವಡಿ ಅರಮನೆ ನಂದಳಿಕೆ ಸುಹಾಸ್ ಹೆಗ್ಡೆ.
"ತಾಪಮಾನ ಏರಿಕೆಯಾಗುತ್ತಿದ್ದು ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಪ್ರತೀ ವರ್ಷವೂ ವಿಶೇಷತೆಯನ್ನು ಹೊಂದಿರುವ ನಂದಳಿಕೆ ಸಿರಿಜಾತ್ರೆಯ ಪ್ರಚಾರ ಫಲಕ ಈ ಮತ್ತಷ್ಟು ವಿಭಿನ್ನತೆಯಿಂದ ಕೂಡಿದೆ. ಸುಡು ಬಿಸಿಲಿನಲ್ಲಿ ಬಾಯಾರಿ ಬರುವ ಪಕ್ಷಿಗಳಿಗೆ ನೀರುಣಿಸಲು ಪ್ರಚಾರ ಫಲಕದಲ್ಲಿ ಮಣ್ಣಿನ ಪಾತ್ರೆಯನ್ನು ಜೋಡಿಸಲಾಗಿದೆ. ಪಕ್ಷಿ ಸಂಕುಲಗಳಿಗೆ ನೀರುಣಿಸುವುದರ ಜತೆಗೆ ಪರಿಸರ ಸ್ನೇಹಿ ಸಿರಿ ಜಾತ್ರೆಯ ಪರಿಕಲ್ಪನೆ ನಮ್ಮದಾಗಿದೆ". - ಯನ್.ಸುಹಾಸ್ ಹೆಗ್ಡೆ, ನಂದಳಿಕೆ ಚಾವಡಿ ಅರಮನೆ