ಕಾರ್ಕಳ, ಮಾ 21(MSP): ಬೈಲೂರು ಹೈಸ್ಕೂಲ್ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಕರಿಕಲ್ಲಿನ ಕ್ವಾರೇಗೆ ಕಾರ್ಕಳ ಎ.ಎಸ್.ಪಿ ಕೃಷ್ಣಕಾಂತ್ ನೇತೃತ್ವದ ಪೊಲೀಸರು ದಾಳಿ ನಡೆಸಿ ಅಪಾಯ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ವಶಪಡಿಸಿದ್ದಾರೆ.
ನೀರೆ ರಾಮಕೃಷ್ಣ ಶೆಟ್ಟಿ ಎಂಬವರ ಮಹಾಗಣಪತಿ ಸ್ಟೋನ್ ಕ್ರಶರ್ಗೆ ಬುಧವಾರ ಸಂಜೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಕ್ವಾರೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರೆಲ್ಲರೂ ಕೆಲಸ ಮುಗಿಸಿ ಹೊರ ತೆರಳಿದ ಬಳಿಕ ಪ್ರತಿದಿನ6 ರ ವೇಳೆಗೆ ಭಾರೀ ಪ್ರಮಾಣದಲ್ಲಿ ಸ್ಫೋಟಕಗಳನ್ನು ಉಪಯೋಗಿಸಿ ಕರಿಕಲ್ಲನ್ನು ಛಿದ್ರಗೊಳಿಸುತ್ತಿದ್ದರು. ಅಲ್ಲಿ ಉಪಯೋಗಿಸುತ್ತಿದ್ದ ಸ್ಫೋಟಕಗಳು ಪ್ರಬಲವಾಗಿತ್ತಲ್ಲದೇ ಅದರ ಸದ್ದು ಹಲವು ಕಿ.ಮೀದೂರದ ವರೆಗೆ ಕೇಳುತ್ತಿತ್ತು ಹಾಗೂ ಭೂ ಕಂಪನವಾಗುತ್ತಿದ್ದ ಅನುಭವದ ದೂರು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿತ್ತು.
ಖಚಿತ ಮಾಹಿತಿಯ ಮೇರೆಗೆ ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿದ ಸಂದರ್ಭದಲ್ಲಿ ಘಟನಾ ಸ್ಥಳದಿಂದ ನವಾಜ್ ಹಾಗೂ ಕೇರಳದ ಬೈಜು ಎಂಬವರು ಬಂಧನಕ್ಕೊಳಗಾದರೆ ತಮಿಳುನಾಡು ಮೂಲದ ಸುರೇಶ್, ಪರಿಕೇಶ್ ಪರಾರಿಯಾಗಿದ್ದಾರೆ. ಇವರೆಲ್ಲರೂ ಸೇರಿಕೊಂಡು ಕ್ವಾರೆಯಲ್ಲಿ ಸ್ಪೋಟಕಕ್ಕೆ ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ಘಟನಾ ಸ್ಥಳದಿಂದ ಏಳು ಲಾರಿಗಳು, 20 ಮೀಟರ್ ವಯರ್, ಜಿಲೇಟಿನ್ ಸ್ಟಿಕ್-106, ಎಲೆಕ್ಟ್ರೋನಿಕ್ಸ್ ಡಿಟೆನೆಟರ್-37 ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಕ್ವಾರೆಯ ಮಾಲಿಕ ನೀರೆ ರಾಮಕೃಷ್ಣ ಶೆಟ್ಟಿ ಪ್ರಸ್ತುತ ಲೀಸ್ನ ಮೇರೆಗೆ ಕ್ವಾರೆ ನಡೆಸುತ್ತಿದ್ದ ಕೇರಳ ಮೂಲದ ಜುನೇದ್ ಸಹಿತ ಒಟ್ಟು ಆರು ಮಂದಿಯ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ. ಪೊಲೀಸ್ ವೃತ್ತ ನಿರೀಕ್ಷಕ ಹಾಲ್ಮೂರ್ತಿ, ನಗರ ಠಾಣಾಧಿಕಾರಿ ನಂಜಾ ನಾಯಕ್ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.