ಉಪ್ಪಿನಂಗಡಿ, ಮಾ 24 (DaijiworldNews/MS): ಮಗಳ ಮದುವೆಗೆ ಚಿನ್ನವನ್ನು ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ 10 ಲಕ್ಷ ರೂ. ನಗದು ಹಣ ಕೊಂಡೊಯ್ಯುತ್ತಿದ್ದ ವೇಳೆ ಇಳಂತಿಲ ಗ್ರಾಮದ ಪೆದಮಲೆ- ಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ಅಪರಿಚಿತ ಯುವಕನೋರ್ವ ಹಣವನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಒಂಬತ್ತು ಲಕ್ಷ ರೂ. ನಗದಿನೊಂದಿಗೆ ವಶಪಡಿಸಿಕೊಂಡಿದ್ದಾರೆ.
ಇಳಂತಿಲ ಗ್ರಾಮದ ಕಾರ್ಯಪಾಡಿ ಮನೆ ನಿವಾಸಿ ಮಹಮ್ಮದ್ ಕೆ. (60) ಅವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟ 10 ಲಕ್ಷ ರೂ.ವನ್ನು ಬಟ್ಟೆಯ ಚೀಲದಲ್ಲಿ ತುಂಬಿಸಿದ ಹಣವನ್ನು ಅವರು ದ್ವಿಚಕ್ರ ವಾಹನದ ಸೀಟಿನ್ನೆತ್ತಿ ಅದರಲ್ಲಿ ಇಡುತ್ತಿದ್ದಂತೆಯೇ ಮುಹಮ್ಮದ್ ಅವರ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿದ್ದಾನೆ.
ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಇಳಂಕಿಲ ಗ್ರಾಮದ ಕಡವಿನ ಬಾಗಿಲು ಮನೆ ನಿವಾಸಿ ಅಬ್ದುಲ್ ಖಾದ್ರಿ ಅವರ ಮಗನಾದ ಮುಸ್ತಫ (41)ನನ್ನು ಗುರುವಾರದಂದು ಬಂಧಿಸಿ 9 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೋರ್ವ ಆರೋಪಿ 1ಲಕ್ಷ ರೂ. ನೊಂದಿಗೆ ಪರಾರಿಯಾಗಿದ್ದಾನೆ.