ಬಂಟ್ವಾಳ, ಮಾ 23 (DaijiworldNews/DB): ಜಗತ್ತಿಗೆ ಕೃಷಿ ಮತ್ತು ಋಷಿ ಪರಂಪರೆಯನ್ನು ಪರಿಚಯಿಸಿದ ದೇಶ ನಮ್ಮದು. ರೈತರ ಪರಿಶ್ರಮದಿಂದಾಗಿ ಕೋವಿಡ್ ಬಳಿಕವೂ ದೇಶ ಆರ್ಥಿಕವಾಗಿ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವಂತಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದ್ದಾರೆ.
ಬಿ.ಸಿ.ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಆಶ್ರಯದಲ್ಲಿ ದ.ಕ. ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ನಡೆದ ಜಿಲ್ಲಾ ಮಟ್ಟದ ಬೃಹತ್ ರೈತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತನ ಬದುಕು ನಿಂತರೆ ದೇಶದ ಉಸಿರೇ ನಿಲ್ಲುತ್ತದೆ. ಸೈನಿಕ ಮತ್ತು ಕೃಷಿಕ ಇವರಿಬ್ಬರು ನಿದ್ರಿಸಿದರೆ ದೇಶ ಉಳಿಯಲು ಸಾಧ್ಯವಿಲ್ಲ, ಅದಕ್ಕಾಗಿ ಕಳೆದ 60 ವರ್ಷಗಳಲ್ಲಿ ಘೋಷಣೆಯಾಗಿಯೇ ಉಳಿದಿದ್ದ" ಜೈ ಜವಾನ್, ಜೈ ಕಿಸಾನ್ ಘೋಷಣೆಯನ್ನು ಪ್ರಧಾನಿ ಮೋದಿಯವರು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯದ ಡಬ್ಬಲ್ ಇಂಜಿನ್ ಬಿಜೆಪಿ ಸರಕಾರ ವಿವಿಧ ಯೋಜನೆಗಳ ಮೂಲಕ ಕೃಷಿಕರಿಗೆ ಕೋಟ್ಯಾಂತರ ರೂ. ಆರ್ಥಿಕ ನೆರವು ನೀಡಿದೆ ಎಂದ ಅವರು ಕೃಷಿಕರು ನೆಮ್ಮದಿಯಿಂದ ಬದುಕಿದರೆ ಮಾತ್ರ ಗ್ರಾಮಗಳು ರಾಮ ರಾಜ್ಯವಾಗಬಹುದೆಂಬ ಕಲ್ಪನೆಯಲ್ಲಿ ರೈತರ ಪರವಾದ ಬಿಜೆಪಿ ಸರಕಾರ ರಾಜ್ಯದಲ್ಲಿ ಮತ್ತೊಮ್ಮೆ ಬರಬೇಕು. ಈ ನಿಟ್ಟಿನಲ್ಲಿ ರೈತರು ಸಂಕಲ್ಪ ಮಾಡಬೇಕು ಎಂದರು.
ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಇಡೀ ಜಗತ್ತಿಗೆ ಶೋಭೆ ತರುವಂತ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಚುನಾವಣೆ ಎದುರಾದಾಗಲೆಲ್ಲ ಅಧಿಕಾರದ ಆಸೆಗಾಗಿ ವಿವಿಧ ವೇಷ, ಸುಳ್ಳು ಭರವಸೆಗಳ ಮೂಲಕ ಜನರನ್ನು ಮೋಸ ಮಾಡಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ಜೊತೆಗೆ ಹೋದರೆ ನಮಗೆ ಭವಿಷ್ಯವಿಲ್ಲ ಎಂಬ ಸ್ಥಿತಿಗೆ ಬಂದಿರುವ ವಿವಿಧ ಪ್ರಾದೇಶಿಕ ಪಕ್ಷಗಳು ಕೂಡ ಕಾಂಗ್ರೆಸ್ ನಿಂದ ದೂರ ಸರಿಯಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಎಂದು ಹೇಳಿದರು.
ಬಂಟ್ವಾಳ ಕ್ಷೇತ್ರದ ಮತದಾರರು ನೀಡಿರುವ ಪ್ರತಿಯೊಂದು ಮತಕ್ಕೂ ನ್ಯಾಯ ಸಿಗುವ ರೀತಿಯಲ್ಲಿ ಅತ್ಯಂತ ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡಿರುವ ಆತ್ಮತೃಪ್ತಿ ಹೊಂದಿದ್ದೆನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದ.ಕ. ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿಗಳಾದ ಸುಧೀರ್ ಕುಮಾರ್ ಕಣ್ಣೂರು, ರಾಮದಾಸ್ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷರಾದ ಕೊರಗಪ್ಪ ನಾಯ್ಕ್, ಸಂದೇಶ್ ಶೆಟ್ಟಿ, ಈಶ್ವರ ಕಟೀಲ್, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ಪ್ರಭಾರಿ ಕೇಶವ ಭಟ್ ಮುಳಿಯ, ಬಂಟ್ವಾಳ ಪ್ರಭಾರಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಕೆಯುಡಬ್ಲುಎಸ್ ಸದಸ್ಯೆ ಸುಲೋಚನಾ ಜಿ.ಕೆ. ಭಟ್, ವಿವಿಧ ಮಂಡಲದ ರೈತ ಮೋರ್ಚಾ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ, ರಮೇಶ್ ಸುಳ್ಯ, ಜಯಂತ ಗೌಡ ಬೆಳ್ತಂಗಡಿ, ಸೋಮನಾಥ ಮೂಡಬಿದ್ರೆ, ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ರೈತ ಮೋರ್ಚಾ ಪ್ರ.ಕಾರ್ಯದರ್ಶಿಗಳಾದ ವಸಂತ ಅಣ್ಣಳಿಕೆ, ರಾಘವೇಂದ್ರ, ಬಿಜೆಪಿ ಬಂಟ್ವಾಳ ಮಂಡಲದ ಪ್ರ. ಕಾರ್ಯದರ್ಶಿ ರವೀಶ್ ಶೆಟ್ಟಿ ಮೊದಲಾದವರಿದ್ದರು.
ದ.ಕ. ಜಿಲ್ಲಾ ಬಿಜೆಪಿ ರೈತ ಮೋರ್ಚಾದ ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿದರು. ಮಹೇಶ್ ಕುಮಾರ್ ಶೆಟ್ಟಿ ಮೇನಾಲ ವಂದಿಸಿದರು. ಬಿಜೆಪಿ ಬಂಟ್ವಾಳ ಮಂಡಲದ ಪ್ರ. ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.