ಉಳ್ಳಾಲ, ಮಾ 23 (DaijiworldNews/DB): ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಕಂಬಳ ಆಯೋಜನೆ ಮಾಡಲಾಗಿದ್ದು ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ಲವಕುಶ ಜೋಡುಕರೆ ಹೆಸರಿನಲ್ಲಿ ಹೊನಲು ಬೆಳಕಿನ ನರಿಂಗಾನ ಕಂಬಳ ಮಾ. 25ರಂದು ನಡೆಯಲಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.
ಕಂಬಳ ಕರೆಯ ಬಳಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 25ರಂದು ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರ ಶಾಂತಿಪಳಿಕೆಯ ಪ್ರಧಾನ ಪ್ರಧಾನ ತಂತ್ರಿಗಳಾದ ವರ್ಕಾಡಿ ರಾಜೇಶ್ ತಾಳಿತ್ತಾಯರವರು ಉದ್ಘಾಟಿಸಲಿದ್ದಾರೆ. ಕರೆಯನ್ನು ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆಯಾನೆ ಮಂಜು ಭಂಡಾರಿ ಅವರು ಉದ್ಘಾಟಿಸಲಿದ್ದಾರೆ. ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಮುಖಂಡರುಗಳಾದ ಗುಣಕರ ಆಳ್ವ ಯಾನೆ ರಾಮ ರೈ ಬೋಳಿಯಾರ್, ಮಂಗಿಲ್ ಮಾರ್ ಶ್ರೀ ಅಣ್ಣಪ್ಪ ಸ್ವಾಮಿ ಹಾಗೂ ಪರಿವಾರದ ದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರ ಬಡಾಜೆ ರವಿಶಂಕರ್ ಶೆಟ್ಟಿ , ಶ್ರೀ ಕ್ಷೇತ್ರ ತಲಪಾಡಿಯ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಲ, ದೇವಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯ, ಶ್ರೀ ಕ್ಷೇತ್ರ ಶಾಂತಿಪಳಿಕೆಯ ಆಡಳಿತ ಮೊಕ್ತೇಸರ ಪ್ರಸನ್ನ ಪಕ್ಕಳ ಬಲೆತ್ತೋಡು, ಕಂಬಳ ಸಮಿತಿಯ ಜಿಲ್ಲಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಬ್ದುಲ್ ಅಜೀಝ್ ಯಾನೆ ಮೈಸೂರು ಬಾಬಾ, ಎಸಿಪಿ ಧನ್ಯಾ ನಾಯಕ್, ಪಣಂಬೂರು ಇಡ್ಯ ಶ್ರೀ ಧೂಮಾವತಿ ದೇವಸ್ಥಾನದ ಗಡಿ ಪ್ರಧಾನ ಪ್ರಭಾಕರ್ ರೈ ಯಾನೆ ಅಣ್ಣಪ್ಪ ಅರುವಾಲ್, ಸ್ಥಳೀಯ ಸಂತ ಲಾರೆನ್ಸರ ದೇವಾಲಯದ ಧರ್ಮ ಗುರು ಫಾ. ಪೆಡ್ರಿಕ್ ಕೊರೆಯಾ, ನೆತ್ತಿಲ ಬಾಳಿಕೆ ಗಡಿಪ್ರದಾನ ಮೋಹನ್ ದಾಸ್ ಭಂಡಾರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಬೆಳ್ಳಿಹಬ್ಬ ದಾಖಲಿಸಿದಂತಹ ಪಜೀರು ಕಂಬಳದ ಶ್ರೇಯಸ್ಸಿಗೆ ಪಾತ್ರವಾದ ಕಂಬಳ ನಡೆಸಿದ ಹಿರಿಯರಾದ ವೆಂಕಪ್ಪ ಕಾಜವ ಮಿತ್ತಕೋಡಿ ಅವರ ಗೌರವಾಧ್ಯಕ್ಷತೆಯಲ್ಲಿ, ಸಂಘಟಕ ಪ್ರಶಾಂತ್ ಕಾಜವ ಮಿತ್ತಕೋಡಿ ಅವರ ಕಾರ್ಯಾಧ್ಯಕ್ಷತೆಯಲ್ಲಿ ಕಂಬಳ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ಕಂಬಳದಲ್ಲಿ ಕಾನೂನು ಉಲ್ಲಂಘನೆ ಆಗದಂತೆ ಪೇಟಾದ ನಿಯಮ ಪ್ರಕಾರವೇ ಕಂಬಳ ನಡೆಸುವ ಸಲುವಾಗಿ ದಕ್ಷರನ್ನೊಳಗೊಂಡ ಕಂಬಳ ಪ್ರೇಮಿಗಳೇ ಇರುವ ಕಂಬಳ ಸಮಿತಿ ಹಾಗೂ ಇತರ ಉಪ ಸಮಿತಿ ರಚಿಸಲಾಗಿದೆ. 24 ಗಂಟೆ ಒಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ತಲಪಾಡಿ ಕಂಬಳ, ಪೈವಳಿಕೆ ಕಂಬಳ ಈಗ ನಡೆಯುತ್ತಿಲ್ಲವಾದ್ದರಿಂದ ಕಾಸರಗೋಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳ ಮಾಲೀಕರು ತಮ್ಮ ಅದೃಷ್ಟ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳನ್ನು ಸ್ಪರ್ಧೆಗೆ ತರಲಿದ್ದಾರೆ. ದ.ಕ, ಉಡುಪಿ ಜಿಲ್ಲೆಗಳಿಂದ ಕೋಣಗಳು ಭಾರೀ ಸಂಖ್ಯೆಯಲ್ಲಿ ಜಮಾವಣೆ ಆಗಲಿದೆ ಎಂದು ವಿವರಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಮಾತನಾಡಿ, ಮೋರ್ಲ ಬೋಳದ ಈ ಗದ್ದೆಯನ್ನು ಶಾಸಕರು ಕೇವಲ ಒಂದು ದಿನದಲ್ಲಿ ನಿರ್ಧರಿಸಿ ಮರು ದಿನವೇ ಶಿಲಾನ್ಯಾಸಗೈಯುವ ಮೂಲಕ ಕರೆಯನ್ನು ತ್ವರಿತ ಅವಧಿಯಲ್ಲಿ ಬಹಳ ಸುಂದರವಾಗಿ ನಿರ್ಮಿಸಿರುವುದು ದಾಖಲೆ. ಸಾಧಾರಣವಾಗಿ 170 ಮೀಟರ್ ಉದ್ದದ ಕರೆಯ ನಿರ್ಮಾಣ ಬಹಳ ಅಪರೂಪ. ಅಂತಹ ಒಂದು ಕರೆಯನ್ನು ಈ ಲವಕುಶ ಜೋಡು ಕರೆ ಕಂಬಳಕ್ಕಾಗಿ ನಿರ್ಮಿಸಲಾಗಿದೆ ಎಂದರು.
ಈಗಾಗಲೇ ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ,ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. ಮುಖ್ಯವಾಗಿ ದೂರ ದೂರದಿಂದ ಬರುವಂತಹ ಕೋಣಗಳ ಯಜಮಾನರಿಗೆ ಅನುಕೂಲವಾಗಲು ಕೋಣಗಳನ್ನು ಇಳಿಸಲು ಮತ್ತು ಕೋಣಗಳಿಗೆ ವಿಶೇಷವಾದಂತಹ ಉಪಚಾರಕ್ಕಾಗಿ ಸುಮಾರು 10 ಎಕರೆ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಅನುಭವಿ ಸ್ವಯಂ ಸೇವಕರ ತಂಡ ಪಾರ್ಕಿಂಗ್ ಜವಬ್ದಾರಿ ವಹಿಸಿದ್ದಾರೆ. ಬೆಳಕು ವ್ಯವಸ್ಥೆ ಮಾಡಲಾಗಿದೆ. ವೇದಿಕೆ ನಿರ್ಮಾಣ ಕಾರ್ಯ ಅಂತಿಮ ಹಂತದತ್ತ ಬಂದಿದೆ. ಈಗಾಗಲೇ ಸುಮಾರು 150 ಮಂದಿ ಕೋಣದ ಮಾಲೀಕರನ್ನು ಸಂಪರ್ಕಿಸಲಾಗಿದ್ದು ಅವರೆಲ್ಲರೂ ಭಾಗವಹಿಸುವಂತಹ ಭರವಸೆಯನ್ನು ನೀಡಿದ್ದಾರೆ ಎಂದು ವಿವರಿಸಿದರು.
ವಿಜೇತ ಕೋಣಗಳ ಮಾಲೀಕರಿಗೆ ವಿಶೇಷ ಬಹುಮಾನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಕಂಬಳ ಸಮಿತಿಯಿಂದ ನಡೆದ 2022-23ರ ಸಾಲಿನಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ ಕೋಣದ ಓಟಗಾರರಿಗೆ ವರ್ಷದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನಮ್ಮಕಂಬಳ ಟೀಂ ದುಬೈನಿಂದ ಸನತ್ ಕುಮಾರ್ ಶೆಟ್ಟಿ ಹಾಗೂ ನಮ್ಮ ಕುಡ್ಲ ಚಾನಲ್ ಮುಂದಾಳತ್ವದಲ್ಲಿ ನರಿಂಗಾನದ ಲವ ಕುಶ ಜೋಡುಕರೆ ಕಂಬಳದ ವೇದಿಕೆಯಲ್ಲಿ ವಿತರಣೆ ಮಾಡಲಾಗುವುದು ಎಂದರು.
ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ, ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಮೋರ್ಲಗುತ್ತು, ಕರುಣಾಕರ ಶೆಟ್ಟಿ ಮೋರ್ಲ, ಮ್ಯಾಕ್ಸಿಯಮ್ ಡಿಸೋಜ, ಮಹಿಳಾ ವಿಭಾಗ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ , ಪ್ರಧಾನ ಸಂಚಾಲಕ ಗಿರೀಶ್ ಆಳ್ವ ಮೋರ್ಲ, ಕೋಶಾಧಿಕಾರಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಜೊತೆ ಕಾರ್ಯದರ್ಶಿಗಳಾದ ಪ್ರೇಮಾನಂದ ರೈ ನೆತ್ತಿಲಕೋಡಿ, ವೈಭವ್ ಶೆಟ್ಟಿ ತಲಪಾಡಿ, ಸಂಚಾಲಕ ನಾಸಿರ್ ನಡುಪದವು, ಮುರಳೀಧರ ಶೆಟ್ಟಿ ಮೋರ್ಲ, ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಪಾರೆ, ಸಹ ಸಂಚಾಲಕರಾದ ಜೋಸೆಫ್ ಕುಟಿನ್ಹ, ವಿನಯ್ (ವಿನು) ಶೆಟ್ಟಿ ನಾರ್ಲ ತಲಪಾಡಿ, ಅಜೀಝ್ ಆರ್ ಕೆ ಸಿ, ಸುಂದರ ಪೂಜಾರಿ ಕೋಡಿಮಜಲು ಮೋರ್ಲ, ಮಾಧ್ಯಮ ಸಂಚಾಲಕ ಸತೀಶ್ ಕುಮಾರ್ ಪುಂಡಿಕಾಯಿ ಉಪಸ್ಥಿತರಿದ್ದರು.