ಬ್ರಹ್ಮಾವರ, ಮಾ 22 (DaijiworldNews/DB): ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 5,00,790 ರೂ. ಮೌಲ್ಯದ 220 ಚೀಲ ಪಡಿತರ ಅಕ್ಕಿಯನ್ನು ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರು ಪೊಲೀಸರ ಸಹಕಾರದೊಂದಿಗೆ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಸಾಗಾಟಕ್ಕೆ ಬಳಸಿದ ಕಂಟೈನರ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬ್ರಹ್ಮಾವರ ಚಾಂತಾರು ಗ್ರಾಮದ ಕೃಷಿ ಕೇಂದ್ರದ ಬಳಿ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬ್ರಹ್ಮಾವರ ಠಾಣಾ ಪಿಎಸ್ಐ ಹಾಗೂ ಸಿಬಂದಿಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ತಾಲೂಕು ಆಹಾರ ನಿರೀಕ್ಷಕರು 5,00,790 ರೂ. ಮೌಲ್ಯದ 220 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಕಿಯನ್ನು ಸಾಗಿಸುತ್ತಿರುವ ಬಗ್ಗೆ ವಾಹನ ಚಾಲಕ ಕುಮಾರ (37) ಅವರಲ್ಲಿ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಸಲ್ಲಿಸಲು ಆತ ವಿಫಲರಾದರು. ಹೆಚ್ಚಿನ ವಿಚಾರಣೆ ನಡೆಸಿದಾಗ ತಾನು ಚಾಲಕನಾಗಿದ್ದು, ವಾಹನ ಮಾಲಕ ಪ್ರಶಾಂತ ನಾಯಕ್ ತಿಳಿಸಿದಂತೆ ಶಿರಿಯಾರ ಕಲ್ಮರ್ಗಿ ರೈಸ್ಮಿಲ್ನಿಂದ ಮಿಲ್ ಮಾಲಕ ಅನಂತ ನಾಯಕ್ ಅವರು ಕಂಟೈನರ್ ವಾಹನಕ್ಕೆ ಅಕ್ಕಿಯನ್ನು ತುಂಬಿಸಿ ಕೊಟ್ಟಿದ್ದರು. ಅದನ್ನು ತಾನು ಸಾಗಾಟ ಮಾಡುತ್ತಿದ್ದೇನೆ ಎಂದಿದ್ದಾನೆ.
ಬಳಿಕ ಕಂಟೈನರ್ ವಾಹನದ ಹಿಂಭಾಗದ ಬಾಡಿಯಲ್ಲಿದ್ದ ತಲಾ 50 ಕೆಜಿ ತೂಕದ ಬಿಳಿ ಬಣ್ಣದ ಚೀಲದಲ್ಲಿ ತುಂಬಿಸಿರುವ ಒಟ್ಟು 220 ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅಲ್ಲದೆ ಇದರ ಸಾಗಾಟಕ್ಕೆ ಬಳಸಿದ ಕಂಟೈನರ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಆರೋಪಿಗಳ ವಿರುದ್ದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ಕಲಂ: 3, 5, 6(A), 7 & ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ (ನಿಯಂತ್ರಣ) ಆದೇಶ 2016 ಕ್ಲಾಸ್ 3 (2) (3), & 18(1) ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.