ಮಂಗಳೂರು, ಮಾ 21 (DaijiworldNews/DB): ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೂ ಮಂಗಳೂರು ನಗರ ವಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಯಾರಿಕೆ ಹಾಗೂ ದಾಸ್ತಾನು ಚಟುವಟಿಕೆ ನಡೆಸುವ ಕೇಂದ್ರಗಳಿಗೆ ಮಾರ್ಚ್ 6ರಿಂದ 20ರವರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ಸಹಿತ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಮಾರ್ಚ್ 16ರಂದು ದಾಳಿ ನಡೆಸಿ ಒಟ್ಟು 23,400 ಲೀಟರ್ ಬಿಯರ್, 1 ಆಟೋ ರಿಕ್ಷಾ ಮತ್ತು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮಾರ್ಚ್ 17ರಂದು ಬೆಳ್ತಂಗಡಿ ತಾಲೂಕಿನಲ್ಲಿ 4.140 ಲೀಟರ್ ಮದ್ಯ ಹಾಗೂ ಒಂದು ವಾಹನವನ್ನು ಜಪ್ತಿ ಮಾಡಲಾಗಿದೆ. ಮಾರ್ಚ್ 18ರಂದು 20 ಲೀಟರ್ ಶೇಂದಿಯನ್ನು ವಶಪಡಿಸಲಾಗಿದೆ. ಸುಳ್ಯ ತಾಲೂಕಿನಲ್ಲಿ 9.450 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮೂಡಬಿದ್ರೆ ತಾಲೂಕಿನಲ್ಲಿ ಮಾರ್ಚ್ 19ರಂದು 8.640 ಲೀಟರ್ ಮದ್ಯ ವಶಪಡಿಸಲಾಗಿದೆ. ಮಾರ್ಚ್ 20ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ ದಾಳಿ ನಡೆಸಿ 16 ಲೀಟರ್ ಕಳ್ಳಭಟ್ಟಿ, ಹಾಗೂ ಒಂದು ಆರೋಪಿಯನ್ನು ಬಂಧಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಒಟ್ಟು 14.170 ಲೀಟರ್ ಮದ್ಯ ಹಾಗೂ 2 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಜಿಲ್ಲೆಯಲ್ಲಿ 2023ರ ಮಾರ್ಚ್ 6ರಿಂದ 20ರವರೆಗೆ 210 ಅಬಕಾರಿ ದಾಳಿ ನಡೆಸಿ ಕರ್ನಾಟಕ ಅಬಕಾರಿ ಕಾಯಿದೆಯಡಿ ಒಟ್ಟು 8 ಘೋರ ಪ್ರಕರಣಗಳು ಹಾಗೂ 42 15(ಎ) ಪ್ರಕರಣಗಳನ್ನು ದಾಖಲಿಸಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ, 4 ವಾಹನಗಳನ್ನು ವಶಪಡಿಸಿಕೊಂಡು, 62.670 ಲೀಟರ್ ಮದ್ಯ 31.700 ಲೀ. ಬಿಯರ್, 20 ಲೀಟರ್ ಶೇಂದಿ, 16 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 1,94,993 ರೂ. ಅಂದಾಜು ಮೊತ್ತದ ಸೊತ್ತುಗಳನ್ನು ಜಪ್ತಿಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಕಂಟ್ರೋಲ್ ರೂಂಗೆ ದೂರು ನೀಡಿ
2023ನೇ ಸಾಲಿನಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಅಕ್ರಮ ಮದ್ಯ, ಬೀರ್ ತಯಾರಿಕೆ, ದಾಸ್ತಾನು ಹಾಗೂ ಸಾಗಾಣಿಕೆ ಬಗ್ಗೆ ಸಾರ್ವಜನಿಕರಿಂದ ನೀಡಲಾಗುವ ದೂರುಗಳನ್ನು ಸ್ವೀಕರಿಸಲು ಹಾಗೂ ಚುನಾವಣಾ ಆಯೋಗದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಯಲು ಅಬಕಾರಿ ಇಲಾಖೆಯ ಜಿಲ್ಲಾ ಕೇಂದ್ರ ಕಚೇರಿಯಲ್ಲಿ, ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ.
ಈ ಕಂಟ್ರೋಲ್ ರೂಂಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿಯನ್ನು ಕಂಟ್ರೋಲ್ ರೂಂ. ಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.
ನಗರದ ಮೇರಿಹಿಲ್ನಲ್ಲಿರುವ ಅಬಕಾರಿ ಉಪ ಆಯುಕ್ತರ ಕಚೇರಿ ಟೋಲ್ ಫ್ರೀ ಸಂಖ್ಯೆ 1800 -4253872, ದೂ.ಸಂಖ್ಯೆ:0824 - 2213872. ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂ.ಸಂಖ್ಯೆ:08255-232726, ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08256-298757, ಪುತ್ತೂರು ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08251-238481, ಸುಳ್ಯ ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08257-231309 ಅನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ವಿವರಿಸಿದ್ದಾರೆ.