ಮಂಗಳೂರು, ಮಾ 21 (DaijiworldNews/DB): ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವೈಫಲ್ಯವನ್ನು ಖಂಡಿಸಿ ಮಂಗಳೂರು ನಗರ ಬ್ಲಾಕ್, ಮಂಗಳೂರು ಉತ್ತರ ಬ್ಲಾಕ್ ಮತ್ತು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯು ಮಾರ್ಚ್ 21ರ ಮಂಗಳವಾರದಂದು ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಮಾಜಿ ಎಂಎಲ್ಸಿ ಐವನ್ ಡಿಸೋಜಾ, ಮಹಾನಗರ ಪಾಲಿಕೆಯ ಆಡಳಿತದ ಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಕೆಲಸ ಮಾಡುವ ಶಾಸಕರು ಇಲ್ಲಿ ಇದ್ದಾರೆಯೇ ಎಂದು ಧರಣಿ ನಡೆಸುತ್ತಿದ್ದೇವೆ. ರಸ್ತೆಗಳಲ್ಲಿ ಕಸದ ರಾಶಿ ಬಿದ್ದಿದ್ದು, ನಗರವೇ ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳು ಎಲ್ಲೆಂದರಲ್ಲಿ ಉತ್ಪತ್ತಿಯಾಗುತ್ತಿವೆ ಎಂದು ಆರೋಪಿಸಿದರು.
ಏಳು ವರ್ಷಗಳ ಒಪ್ಪಂದದ ನಂತರ, ಆಂಟೋನಿ ವೇಸ್ಟ್ ಮ್ಯಾನೇಜ್ಮೆಂಟ್ ನೊಂದಿಗಿನ ಒಪ್ಪಂದವನ್ನು ಮತ್ತೆ ಅರ್ಧ ವರ್ಷಕ್ಕೆ ವಿಸ್ತರಿಸಿದೆ. ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಪರಿಶೀಲಿಸುವುದು ಪಾಲಿಕೆಯ ಜವಾಬ್ದಾರಿಯಾಗಿದೆ. ನಗರ ಈಗ ಎದುರಿಸುತ್ತಿರುವ ಸಮಸ್ಯೆಗೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಸಂಪೂರ್ಣ ಹೊಣೆ ಎಂದರು.
ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಜನರ ತೆರಿಗೆ ಹಣ ಬಳಸಲಾಗುತ್ತದೆ. ಆದರೆ ಆ ಹಣವನ್ನು ಜನರ ಮೂಲಭೂತ ಅಗತ್ಯಗಳಿಗೆ ಬಳಸಬೇಕು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಕೋಟ್ಯಾಂತರ ಹಣ ತರಲಾಗಿತ್ತು. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಹಾನಗರ ಪಾಲಿಕೆ ಸಂಪೂರ್ಣ ಭ್ರಷ್ಟಗೊಂಡಿದೆ. ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. 5 ವರ್ಷಗಳ ಅವಧಿಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಸಾಮಾನ್ಯ ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ಯೋಜನೆ ತಂದಿಲ್ಲ ಎಂದು ಆಪಾದಿಸಿದರು.
ಸಮಾನ ವೇತನ ನೀಡದ ಕಾರಣ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಶಾಸಕರು, ಮೇಯರ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಪಚ್ಚನಾಡಿಯಲ್ಲಿ ಒಂದರ ಹಿಂದೆ ಒಂದರಂತೆ ಬೆಂಕಿ ಅವಘಡಗಳು ಸಂಭವಿಸಿವೆ. ಆರೋಗ್ಯ ಸಮಸ್ಯೆಗಳಿಂದ ಜನರು ಸಾಯುತ್ತಾರೆ. ನಮ್ಮ ಶಾಸಕರಿಗೆ ಈ ಬಗ್ಗೆ ಆಸಕ್ತಿ ಕಡಿಮೆ. ಅವರ ನಿರ್ಲಕ್ಷ್ಯವೇ ಪಚ್ಚನಾಡಿಯನ್ನು ಈ ಸ್ಥಿತಿಗೆ ತಂದಿದೆ ಎಂದು ಐವನ್ ಹರಿಹಾಯ್ದರು.
ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್ ಮಾತನಾಡಿ, 2013ರಲ್ಲಿ ಪಾಲಿಕೆಯಲ್ಲಿ ಬಿಜೆಪಿ ಸರಕಾರ ಇದ್ದಾಗಲೂ ಇದೇ ಸಮಸ್ಯೆ ಎದುರಾಗಿತ್ತು. ರಸ್ತೆ ತುಂಬೆಲ್ಲಾ ಕಸ ಸುರಿಯುತ್ತಿತ್ತು. ಜನಸಾಮಾನ್ಯರು ತಮ್ಮ ಮೂಲ ಸೌಕರ್ಯಗಳನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ತ್ಯಾಜ್ಯ ಸಂಗ್ರಹಿಸುವ ವಾಹನಗಳು ಹಲವಾರಿದ್ದರೂ ನಗರದಲ್ಲಿ ಓಡುತ್ತಿರುವುದು ಕೆಲವು ಮಾತ್ರ. ಆಂಟನಿ ತ್ಯಾಜ್ಯ ಸಂಸ್ಕರಣಾ ವಾಹನಗಳ ಚಾಲಕರು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದು, ಎರಡು ದಿನದೊಳಗೆ ತ್ಯಾಜ್ಯ ಸಂಗ್ರಹಿಸದಿದ್ದರೆ ಪ್ರತಿ ವಾರ್ಡ್ನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ನವೀನ್ ಡಿಸೋಜ ಮಾತನಾಡಿ, ಶಾಸಕ ವೇದವ್ಯಾಸ್ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಅವರು ಪೌರ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ. ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ, ತೆರಿಗೆ ಹೆಚ್ಚಿಸಿ ಜನತೆಯನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇದೀಗ ನಗರ ದುರ್ವಾಸನೆಯಿಂದ ನರಳುತ್ತಿದೆ. ಆಂಟನಿ ತ್ಯಾಜ್ಯ ನಿರ್ವಹಣೆಯಲ್ಲಿ ಎಷ್ಟು ವಾಹನಗಳು ಮತ್ತು ನೌಕರರು ಇದ್ದಾರೆ ಎಂಬ ನಿಖರವಾದ ಲೆಕ್ಕಾಚಾರ ಅವರ ಬಳಿ ಇಲ್ಲ, ನಗರದಲ್ಲಿ ಆಹಾರ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ, ಅಲ್ಲಿ ತ್ಯಾಜ್ಯವನ್ನು ಯಾರು ಸಂಗ್ರಹಿಸುತ್ತಾರೆ? ಎಂದು ಪ್ರಶ್ನಿಸಿದರು.