ಮಂಗಳೂರು, ಮಾ 20(SM): ರಾಜ್ಯದಲ್ಲಿ ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಪಾರದರ್ಶಕ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸುವ ಸಲುವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಉತ್ತರ ಪತ್ರಿಕೆಗಳನ್ನು ಇರಿಸುವ ಭದ್ರತಾ ಕೊಠಡಿಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಜೊತೆಗೆ ಯಾವುದೇ ಗೊಂದಲಗಳು ಉಂಟಾಗದಂತೆ ಸೂಕ್ತ ಮಾರ್ಗದರ್ಶನ ನೀಡಲು ಸಿಬ್ಬಂದಿಗಳನ್ನೂ ನಿಯೋಜನೆ ಮಾಡಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಕೂಡ ಜಾರಿಗೊಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹೊಸದಾಗಿ ಒಟ್ಟು 27,780 ಸೇರಿದಂತೆ ಒಟ್ಟು 31192 ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. 95 ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳು ನಡೆಯುತ್ತಿದ್ದು, ಖಾಸಗಿ ಅಭ್ಯರ್ಥಿಗಳಿಗೆ 5 ಕೇಂದ್ರಗಳನ್ನು ನಿಯೋಜಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ ಶಿವರಾಮಯ್ಯ ದಾಯ್ಜಿವರ್ಲ್ಡ್ಗೆ ಮಾಹಿತಿ ನೀಡಿದ್ದಾರೆ.