ಮಂಗಳೂರು, ಮಾ 21 (DaijiworldNews/MS): ವಿವಿಧ ಬೇಡಿಕೆ ಆಗ್ರಹಿಸಿ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರ ಪ್ರತಿಭಟನೆ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ೯ನೇ ದಿನಕ್ಕೆ ಮುಂದುವರಿದಿದೆ. ನಗರ ಪ್ರದೇಶದ ಪ್ರಮುಖ ವಾರ್ಡ್ಗಳು ಸೇರಿದಂತೆ ಅಪಾರ್ಟ್ಮೆಂಟ್, ಮನೆ ಸೇರಿದಂತೆ ನಾನಾ ಭಾಗದಲ್ಲಿ ಕಸ ವಿಲೇವಾರಿಯಾಗದೇ ಸಮಸ್ಯೆ ತೀವ್ರವಾಗಿದೆ.
ನಾಗರಿಕರು ತಮ್ಮ ಮನೆಯ ಕಸವನ್ನು ರಸ್ತೆಯ ಪಕ್ಕದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕಸ ತ್ಯಾಜ್ಯ ಸಂಗ್ರಹಣೆ ವ್ಯವಸ್ಥೆ ಸ್ಥಗಿತದಿಂದಾಗಿ ರಸ್ತೆಯಲ್ಲಿ ಕಸದ ರಾಶಿ ಹೆಚ್ಚುತ್ತಿದೆ. ಬೀದಿ ಬದಿ ಅಂಗಡಿಗಳ ಹಾಗೂ ಹೂ ಹಣ್ಣು ತರಕಾರಿ ಅಂಗಡಿಗಳಲ್ಲಿನ ಕಸದ ರಾಶಿಯೂ ರಸ್ತೆ ಸೇರುತ್ತಿವೆ. ಅಲ್ಪ ಪ್ರಮಾಣದಲ್ಲಿರುವ ಕಾಯಂ ಪೌರ ಕಾರ್ಮಿಕರು ನಗರದ ಸ್ವಚ್ಛತಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ನಗರದ ಎಲ್ಲ ಕಡೆಗಳಲ್ಲಿ ಕಸ ವಿಲೇವಾರಿ ಸಾಧ್ಯವಾಗುತ್ತಿಲ್ಲ.ರಸ್ತೆಯ ಬದಿಯಲ್ಲಿ ಹಲವೆಡೆ ತ್ಯಾಜ್ಯ ರಾಶಿ ಬಿದ್ದಿದ್ದು ದುರ್ವಾಸನೆ ಬರುತ್ತಿದೆ.
ಕಸ ವಿಲೇವಾರಿ ಮಾತ್ರವಲ್ಲದೇ ಒಳಚರಂಡಿ ನಿರ್ವಹಣೆಯಂತಹ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಿದ್ದು, ಒಳಚರಂಡಿ ಸೋರಿಕೆಯಾಗಿ , ಮುಖ್ಯರಸ್ತೆ ಒಳರಸ್ತೆಗಳಲ್ಲಿ ಹರಿದು ಹೋಗುತ್ತಿದೆ.
ಮಾ.13 ರಿಂದ ಆರಂಭವಾದ ಹೊರಗುತ್ತಿಗೆ ನೌಕರರ ನೇರ ನೇಮಕಾತಿ/ ನೇರ ಪಾವತಿಗೆ ಆಗ್ರಹಿಸಿ ಪೌರ ಕಾರ್ಮಿಕರ ಬೆಂಗಳೂರಿನಲ್ಲಿ ನಡೆಯುತ್ತಿರುವ ಧರಣಿ ಮುಂದುವರಿದಿದ್ದು,ಮುಖ್ಯಮಂತ್ರಿಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಮುಷ್ಕರ ನಿರತರು ತಮ್ಮ ಪಟ್ಟುವನ್ನು ಮತ್ತಷ್ಟು ಗಟ್ಟಿಮಾಡಿಕೊಂಡಿದ್ದಾರೆ. ಮಂಗಳೂರಿನ ಆಳಕೆ ಎಸ್ ಟಿಪಿ ಆವರಣದಲ್ಲಿ ಸುಮಾರು ೧೩೦ ಕ್ಕೂ ಹೆಚ್ಚು ಅಧಿಕ ಮಂದಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.