ಪುತ್ತೂರು, ಮಾ 21 (DaijiworldNews/DB): ನಾಗರ ಹಾವು ಕಡಿತಕ್ಕೊಳಗಾದ ತಾಯಿಗೆ ಪುತ್ರಿಯೇ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ ಅಪರೂಪದ ಪ್ರಸಂಗ ಪುತ್ತೂರಿನ ಕೆಯ್ಯೂರಿನಲ್ಲಿ ನಡೆದಿದೆ.
ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ ಶ್ರಮ್ಯಾ ರೈ ತಾಯಿಯನ್ನು ರಕ್ಷಿಸಿದ ಮಗಳು. ಕಳೆದೈದು ದಿನಗಳ ಹಿಂದೆ ಈಕೆಯ ತಾಯಿಗೆ ನಾಗರಹಾವು ಕಡಿದಿದ್ದು, ಕೂಡಲೇ ಪುತ್ರಿ ಶ್ರಮ್ಯಾ ತಮ್ಮ ಬಾಯಿಯಿಂದ ವಿಷವನ್ನು ಹೀರಿ ತೆಗೆದು ತಾಯಿಯನ್ನು ರಕ್ಷಿಸಿದ್ದಾರೆ.
ಏನಿದು ಘಟನೆ?
ಶ್ರಮ್ಯಾಳ ತಾಯಿ ಮನೆ ಕೆಯ್ಯೂರಿನ ತಮ್ಮ ಮನೆಯ ಸಮೀಪವೇ ಇದ್ದು, ಅಲ್ಲಿಗೆ ಶ್ರಮ್ಯಾ ಹಾಗೂ ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಆಕೆಯ ತಾಯಿ ಮಮತಾ ರೈ ಹೋಗಿದ್ದರು. ಮನೆಯಲ್ಲಿ ಪಂಪ್ ಸ್ವಿಚ್ ಹಾಕುವುದಕ್ಕೆಂದು ಮಮತಾ ಅವರು ತೋಟಕ್ಕೆ ಹೋಗಿದ್ದಾರೆ. ಸ್ವಿಚ್ ಹಾಕಿ ತೋಟದಿಂದ ವಾಪಸ್ಸಾಗುವಾಗ ಕೆರೆಯ ಬಳಿ ನಾಗರಹಾವು ಇರುವುದು ಗೊತ್ತಾಗದೇ ಅದನ್ನು ತುಳಿದಿದ್ದಾರೆ. ಈ ವೇಳೆ ಹಾವು ಅವರಿಗೆ ಕಚ್ಚಿದೆ. ಕೂಡಲೇ ಮನೆಗೋಡಿ ಬಂದ ಮಮತಾ ರೈ, ವಿಷ ಮೇಲೇರದಂತೆ ಕೆಲಸದಾಳಿನ ಸಹಾಯದಿಂದ ಆ ಜಾಗಕ್ಕೆ ಬೈ ಹುಲ್ಲು ಕಟ್ಟಿದ್ದಾರೆ. ಆದರೆ ಇದು ಪ್ರಯೋಜನವಾಗದು ಎಂದು ಅರಿತುಕೊಂಡ ಶ್ರಮ್ಯಾ ಸಮಯಪ್ರಜ್ಞೆ ಮೆರೆದು ಹಾವು ಕಚ್ಚಿದ ಸ್ಥಳಕ್ಕೆ ತಮ್ಮ ಬಾಯಿಯೂರಿ ಹೀರಿ ವಿಷ ತೆಗೆದಿದ್ದಾರೆ.
ಶ್ರಮ್ಯಾಳ ಪ್ರಥಮ ಚಿಕಿತ್ಸೆ ಬಳಿಕ ಮಮತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಕೂಡಾ ವಿಷ ತೆಗೆದಿದ್ದು ಒಳ್ಳೆಯದಾಯಿತು, ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದಿದ್ದಾರೆ. ಮಗಳ ಸಮಯಪ್ರಜ್ಞೆ ತಾಯಿಯ ಜೀವ ಕಾಪಾಡಿರುವುದಕ್ಕೆ ಶ್ರಮ್ಯಾಳಿಗೆ ಪ್ರಶಂಸೆ ವ್ಯಕ್ತವಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಶ್ರಮ್ಯಾ, ಬೈಹುಲ್ಲು ಕಟ್ಟಿದರೆ ವಿಷ ಏರುವುದಿಲ್ಲ ಎಂಬುದರಲ್ಲಿ ನನಗೆ ವಿಶ್ವಾಸ ಇರಲಿಲ್ಲ. ಹೀಗಾಗಿ ಸಿನಿಮಾಗಳಲ್ಲಿ ನೋಡಿದ, ಇತತರಿಂದ ಕೇಳಿದ ಅನುಭವಗಳ ಮೇರೆಗೆ ನಾನೇ ಬಾಯಿಯೂರಿ ವಿಷ ಹೀರಿ ತೆಗೆದೆ ಎಂದಿದ್ದಾರೆ.