ವಿಟ್ಲ, ಮಾ 21 (DaijiworldNews/HR): ನಾನು ಶಾಸಕನಾಗಿ ಬಂದರೆ ಕನ್ಯಾನ ಪದವಿ ಕಾಲೇಜಿಗೆ ನೂತನ ಕಟ್ಟಡ, ಬೆಂಬನಪದವಿನಲ್ಲಿ ಜಿಲ್ಲಾ ಮಟ್ಟದ ಕ್ರೀಡಾಂಗಣವನ್ನು 100 ಕೋಟಿಯಲ್ಲಿ ನಿರ್ಮಾಣ, ಬಂಟ್ವಾಳ ಕ್ಷೇತ್ರಕ್ಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಅಂಡರ್ ಆರ್ಮ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವುದು ನಿಶ್ಚಿತ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿಯ ಭರವಸೆಗಳ ಹಿಂದೆ ಹೋದ ಜನರಿಗೆ ಸರಿಯಾದ ವಿಚಾರ ತಿಳಿಯುತ್ತಿದೆ. ಸಿದ್ಧರಾಮಯ್ಯ ಸರ್ಕಾರ ಇದ್ದ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಕೆಲಸಗಳಾಗಿದೆ. ಕಾಂಗ್ರೆಸ್ ಪಕ್ಷ ನೀಡಿದ ಭರವಸೆ ಶೇ.97ರಷ್ಟನ್ನು ಅಧಿಕಾರಕ್ಕೆ ಬಂದಾಗ ಪೂರೈಸುವ ಕಾರ್ಯವನ್ನು ಮಾಡಿದೆ. ಯಾವುದೇ ತಪ್ಪು ಕೆಲಸವನ್ನು ಮಾಡದ ನನಗೆ ಜನರು ಇನ್ನೊಂದು ಅವಕಾಶವನ್ನು ನೀಡಬೇಕು ಎಂದರು.
ಇನ್ನು 2017ರಲ್ಲಿ ಬಂಟ್ವಾಳದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ 56 ಕೋಟಿ ರೂ. ಅನುದಾನ ತಂದಿದ್ದು, ಆ ಕಾಮಗಾರಿಯನ್ನು ಬಿಜೆಪಿ ಸರ್ಕಾರ ಇದುವರೆಗೆ ಮಾಡಿಸಿಲ್ಲ. ಬೆಂಜನಪದವು ಕ್ರೀಡಾಂಗಣ, ಪಂಜೆ ಮಂಗೇಶರಾಯ ಭವನ, ಪಡೀಲು ಜಿಲ್ಲಾಧಿಕಾರಿ ಕಚೇರಿ ಕಾಮಗಾರಿಗಳನ್ನು ಬಿಜೆಪಿ ಪೂರ್ತಿ ಮಾಡಿಲ್ಲ. ಶವ ಸಂಸ್ಕಾರಕ್ಕೆ ಬರುತ್ತಿದ್ದ 5 ಸಾವಿರ ಸಹಾಯ ಧನವನ್ನು ನಿಲ್ಲಿಸಿದ ಧರಿದ್ರ ಸರ್ಕಾರ ಈಗ ಆಡಳಿತ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಣಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ರಮಾನಾಥ ರೈ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ 5000 ಕೋಟಿ ರೂ.ಗಳ ಅನುದಾನಗಳ ವಿವರ ನೀಡಿದರು. ಸಾಲೆತ್ತೂರು ಶಾಲೆಯ ಬಳಿ ಯಾತ್ರೆಗೆ ಚಾಲನೆ ನೀಡಲಾಗಿದ್ದು, ಬಳಿಕ ತಲೆಕ್ಕಿ, ಬೊಳ್ಮಾರು, ಆನೆಕಲ್ಲು, ಮಿತ್ತನಡ್ಕ ಮತ್ತು ಕನ್ಯಾನದಲ್ಲಿ ಪಾದಯಾತ್ರೆ ಸಾಗಿತು.