ಮೂಡಬಿದ್ರೆ, ಮಾ 20 (DaijiworldNews/SM): ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿರುವ ಎರಡು ಮನೆಗಳಿಗೆ ಬೆಳಗ್ಗಿನ ವೇಳೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿದ ಘಟನೆ ನಡೆದಿದೆ.
ಬ್ಯಾಂಕ್ ಉದ್ಯೋಗಿಗಳಾಗಿರುವ “ಕ್ಷೇಮ” ದ ರತ್ನಾಕರ ಜೈನ್ ಮತ್ತು ಅಲ್ಲೇ ಪಕ್ಕದ ಮನೆಯಲ್ಲಿರುವ ಧೀರೇಂದ್ರ ಹೆಗ್ಡೆ ಅವರು ಕುಟುಂಬ ಸಮೇತ ಬೆಳಿಗ್ಗೆ 8 ಗಂಟೆಯ ವೇಳೆಗೆ ಪೂಜೆ ಸಲ್ಲಿಸಲು ಬಸದಿಗಳಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕಳ್ಳರು ರತ್ನಾಕರ ಜೈನ್ ಅವರ ಮನೆಯ ಹಿಂಬಾಗಿಲಿನ ಚಿಲಕನ್ನು ಮುರಿದು ಒಳ ಪ್ರವೇಶಿಸಿ 25 ಪವನ್ ಚಿನ್ನ ಮತ್ತು 20 ಸಾವಿರ ನಗದು ಹಾಗೂ ಧಿರೇಂದ್ರ ಹೆಗ್ಡೆ ಅವರ ಮುಂಭಾಗಿಲಿನ ಚಿಲಕಮುರಿದು 20 ಗ್ರಾಂ ಚಿನ್ನ ಹಾಗೂ 60 ಸಾವಿರ ನಗದನ್ನು ದೋಚಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪಣಂಬೂರು ಎಸಿಪಿ ಮನೋಜ್ ಕುಮಾರ್ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೈವೇ ರಸ್ತೆಯ ಬಳಿಯಲ್ಲೇ ಇರುವ ಎರಡೂ ಮನೆಗಳಿಗೆ ಹಗಲು ಹೊತ್ತಿನಲ್ಲಿ ಕಳ್ಳರು ನುಗ್ಗಿರುವುದು ಆಶ್ಚರ್ಯ ಮೂಡಿದ್ದು ಪರಿಚಿತರೇ ಈ ಕೃತ್ಯ ನಡೆಸಿರುವ ಸಂಶಯ ವ್ಯಕ್ತವಾಗಿದೆ.