ಮಂಗಳೂರು, ನ 4: ನಗರದ ನೆಹರು ಮೈದಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯ ಮತ್ತು ಮಂಗಳೂರು ಮೇಯರ್ ಕವಿತಾ ಸನಿಲ್ ನಡುವೆ ವೇದಿಕೆಯಲ್ಲೇ ಜಟಾಪಟಿ ನಡೆದಿದೆ.
ಅಂದಹಾಗೆ ನೀವು ಅಂದುಕೊಂಡ ಹಾಗೆ ಇದು ಫೈಟ್ ಅಲ್ಲ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಡಿಯನ್ ಕರಾಟೆಯ ರಾಷ್ಟ್ರೀಯ ಮುಕ್ತ ಚಾಂಪಿಯನ್ ಶಿಪ್ ನಲ್ಲಿ ನಡೆದ ಘಟನೆಯಿದು. ಐತಿಹಾಸಿಕ ಟೂರ್ನಿಗೆ ಚಾಲನೆ ನೀಡಲು ಸಿಎಂ ಕಡಲನಗರಿಗೆ ಆಗಮಿಸಿದ್ದು, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ಕ್ರೀಡಾ ಪಟುಗಳಿಗೆ ಅಭಿನಂದಿಸಿದ ಸಿಎಂ ಸಿದ್ಧರಾಮಯ್ಯ ಮತ್ತು ಮೇಯರ್ ಕವಿತಾ ಸನಿಲ್ ಕರಾಟೆಯ ಮೂಲಕ ಸಾಂಕೇತಿಕ ಉದ್ಘಾಟನೆ ನೀಡಿ ನೆರೆದ ಜನರನ್ನು ಮನರಂಜಿಸಿದರು.
ವೇದಿಕೆಯಲ್ಲಿ ಮೇಯರ್ ಕವಿತಾ ಸನಿಲ್ ಸಿಎಂ ಅವರಿಗೆ ಕರಾಟೆಯ ಗುದ್ದು ನೀಡಿದಾಗ ಅದಕ್ಕೆ ಪ್ರತಿಯಾಗಿ ಸಿಎಂ ಅವರು ಕರಾಟೆ ಪ್ರದರ್ಶನ ಮಾಡಿದರು. ಈ ಮೂಲಕ ಸಿಎಂ ಸಿದ್ಧರಾಮಯ್ಯ ಮತ್ತು ಮೇಯರ್ ಕವಿತಾ ಸನಿಲ್ ಕರಾಟೆ ಪಟುಗಳಿಗೆ ಉತ್ತೇಜನ ನೀಡಿದರು.