ಉಡುಪಿ, ಮಾ 20 (DaijiworldNews/MS): ಅಂಬೇಡ್ಕರ್ ಆವಾಜ್ ಮನೆ ನಿರ್ಮಾಣಕ್ಕಾಗಿ 7 ಲಕ್ಷ ರೂಪಾಯಿ ಸಹಾಯಧನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿ ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತ್ ಗೆ ಆದೇಶ ನೀಡುವವರೆಗೆ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆ ಮುಂದೆ ಮಾರ್ಚ್ 26 ರಿಂದ ಬೃಹತ್ ಧರಣಿ ನಡೆಸಲಾಗುವುದು ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಎಚ್ಚರಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು “ಎಸ್ ಸಿ ಎಸ್ ಪಿ / ಟಿ ಎಸ್ ಪಿ ಅಡಿಯಲ್ಲಿ ಬಜೆಟ್ ನಲ್ಲಿ 29 ಸಾವಿರ ಕೋಟಿ ರುಪಾಯಿ ಅನುದಾನ ಮಂಜೂರು ಆಗಿದೆ. ಈ ಹಿಂದೆ ನಾವು ಮನೆ ಕಟ್ಟಲು ನೀಡುವ ಸಹಾಯಧನದ ಮೊತ್ತವನ್ನು 7 ಲಕ್ಷ ಕ್ಕೆ ಏರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಕೂಡಾ ಮನವಿ ಮಾಡಿದ್ದೆವು. ಆದರೆ ಇದು ಈ ವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇದು ಸಮಾಜ ಕಲ್ಯಾಣ ಸಚಿವರ ವೈಫಲ್ಯತೆ. ಮಾತ್ರವಲ್ಲದೇ 29 ಸಾವಿರ ಕೋಟಿಯನ್ನು ವಾರಾಹಿ ಯೋಜನೆಗೆ ಡಂಪ್ ಮಾಡಿ ಅದರ ಮೂಲಕ ಅಲ್ಲಲ್ಲಿ ಕೊಳವೆ ಬಾವಿಗಳನ್ನು ತೋಡಲು 8 ಲಕ್ಷ ರುಪಾಯಿ ನೀಡಲಾಗುತ್ತಿದೆ, ಹೆಚ್ಚೆಂದರೆ 2 ಲಕ್ಷ ರುಪಾಯಿ ಖರ್ಚಾಗುವ ಕೊಳವೆ ಬಾವಿಗೆ 8 ಲಕ್ಷ ರುಪಾಯಿ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಎಸ್ ಸಿ / ಎಸ್ ಟಿ ಸಮುದಾಯದವರಿಗೆ ಸ್ವ ಉದ್ಯೋಗಕ್ಕಾಗಿ ರಿಕ್ಷಾ ನೀಡುವ ಬದಲು ಸಚಿವರು ಮುಂದಿನ ದಿನಗಳಲ್ಲಿ ಆಯೋಜನೆ ಮಾಡಬೇಕಾಗಿರುವ ಬೈಕ್ ರ್ಯಾಲಿಗಾಗಿ ಕಾಲೇಜು ಹುಡುಗರಿಗೆ ಬೈಕ್ ಗಳನ್ನು ನೀಡುತ್ತಿದ್ದಾರೆ. ಸಚಿವ ಕೋಟ ಅವರು ಶಾಸಕ ರಘುಪತಿ ಭಟ್ ಕೈಗೊಂಬೆಯಾಗಿದ್ದಾರೆ ಎಂದು ವಿಶ್ವನಾಥ್ ಪೇತ್ರಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಡೂರು, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಜ್ಯೋತಿ ಶಿರಿಯಾರ, ಸಂಘಟನಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಹೆಬ್ರಿ ಘಟಕದ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.