ಮಂಗಳೂರು,ಮಾ20(AZM): ಕರಾವಳಿಯಾದ್ಯಂತ ಶಾಂತಿಯುತ ಲೋಕಸಭಾ ಚುನಾವಣೆಯನ್ನು ನಡೆಸಲು ಪಣತೊಟ್ಟಿರುವ ಪೊಲೀಸರು ದೀಪಕ್ ರಾವ್ ಹತ್ಯೆ ಆರೋಪಿ ಸೇರಿದಂತೆ 12 ರೌಡಿಗಳನ್ನು ಗಡಿಪಾರು ಮಾಡಿದ್ದಾರೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಂದೀಪ್ ಪಟೀಲ್ ರವರು ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ರೌಡಿ ಅರ್ಜುನ್ ಸೇರಿದಂತೆ 12 ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಅಲ್ಲದೆ ವಿವಿಧ ಪ್ರಕರಣಗಳಲ್ಲಿ ದಾಖಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚಿನ ಆರೋಪಿಗಳ ಮೇಲೆ ಪ್ರಿವೆಂಟಿವ್ ಕೇಸು ದಾಖಲು ಮಾಡಲಾಗಿದ್ದು, 2 ಸಾವಿರಕ್ಕೂ ಹೆಚ್ಚಿನ ರೌಡಿಗಳ ಮೇಲೆ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.
ಈ ಕುರಿತು ಈಗಾಗಲೇ ಮಾಹಿತಿ ಕಲೆ ಹಾಕಿರುವ ಪೊಲೀಸ್ ಇಲಾಖೆ ಇನ್ನೂ ಹಲವು ಆರೋಪಿಗಳನ್ನು ಗಡಿಪಾರು ಪಾರು ಮಾಡಲು ಮುಂದಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಈಗಾಗಲೇ ಈ ರೀತಿಯ ಮುನ್ನೆಚ್ಚರಿಕಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.