ಬಂಟ್ವಾಳ, ಮಾ 19 (DaijiworldNews/SM): ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಬೇರೆ ಬೇರೆ ಭಯೋತ್ಪಾದಕ ಕೃತ್ಯಗಳಿಗೆ ದ.ಕ.ಜಿಲ್ಲೆಯೇ ತವರೂರು ಆಗಿದೆಯಾ? ಎಂಬ ಸಂಶಯ ಇದೀಗ ವ್ಯಕ್ತವಾಗಿದೆ. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಹಣಕಾಸು ನೆರವು ಒದಗಿಸಿದ ಹಿನ್ನೆಲೆಯಲ್ಲಿ ಬಂಟ್ವಾಳದ ಮೂವರನ್ನು ಎನ್ ಐ ಎ ತಂಡ ಕಳೆದ ವಾರ ಬಂಧಿಸಿದ್ದು, ಬಂಧಿತರು ಹಣಕಾಸಿನ ನೆರವಿನ ಜೊತೆಗೆ ಕೇರಳ ರಾಜ್ಯದಲ್ಲಿ ನಡೆಯುವ ಕೊಲೆಗಳ ಮಾದರಿಯಲ್ಲಿ ದ.ಕ.ಜಿಲ್ಲೆಯ ಕೊಲೆಗಳಿಗೆ ಇವರು ಪ್ಲಾನ್ ರೂಪಿಸುವ ಪ್ರಮುಖ ರೂವಾರಿಗಳಾಗಿದ್ದರು ಎಂಬ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್ ಎಂಬವರನ್ನು ಎನ್.ಐ.ಎ.ಬಂಧಿಸಿ ತನಿಖೆಯ ದೃಷ್ಟಿಯಿಂದ ದೆಹಲಿಗೆ ಕರೆದುಕೊಂಡು ಹೋಗಿದೆ. ಇವರು ಕೇರಳ ರಾಜ್ಯದಲ್ಲಿ ನಡೆಯುವ ಪ್ರತೀಕಾರದ ಕೊಲೆಗಳ ರೀತಿಯಲ್ಲಿ ದ.ಕ.ಜಿಲ್ಲೆಯಲ್ಲಿ ಯೋಜನೆ ತಯಾರಿಸಿ, ಅದಕ್ಕೆ ಹಣಕಾಸಿನ ಜೊತೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುವ ರೂವಾರಿಗಳಾಗಿದ್ದರು ಎಂಬ ವಿಚಾರ ಬಹಿರಂಗವಾಗಿದೆ. ಅವರು ಜಿಲ್ಲೆಯಲ್ಲಿ ಸಂಘಟನೆಯ ವತಿಯಿಂದ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಸೈಲೆಂಟ್ ಆಗಿ ಜನರ ಮಧ್ಯೆ ಇದ್ದು ಪ್ಲಾನ್ ರೂಪಿಸುವ ಪ್ರಮುಖ ಆರೋಪಿಗಳಾಗಿದ್ದರು ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ ಎನ್ನಲಾಗಿದೆ.
ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮೂವರನ್ನು ಬಿಹಾರದ ಪಾಟ್ನಾಕ್ಕೆ ಹೆಚ್ಚಿನ ತನಿಖೆಗೆ ಕರೆದೊಯ್ದಿದ್ದು, ಅಲ್ಲಿ ತನಿಖೆ ಮುಂದುವರಿದಿದೆ.
ಬಂಟ್ವಾಳ ತಾಲೂಕಿನ ನಂದಾವರ ಪಾಣೆಮಂಗಳೂರು, ಮೆಲ್ಕಾರ್ ಪರಿಸರದ ನಾಲ್ಕು ಮನೆಗಳು ಹಾಗೂ ಎರಡು ಆನ್ ಲೈನ್ ಸೇವಾ ಕೇಂದ್ರಗಳಿಗೆ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸಿತ್ತು. ಈ ಮೂವರು ಯುವಕರು ಬ್ಯಾಂಕ್ ಖಾತೆ ಮೂಲಕ ಫಂಡಿಂಗ್ ಮಾಡಿರುವ ಕುರಿತಾಗಿ ಪ್ರಾಥಮಿಕ ಹಂತದ ಮಾಹಿತಿ ಆಧರಿಸಿ ಇವರನ್ನು ಬಂಧಿಸಲಾಗಿತ್ತು.ಆದರೆ ಇದೀಗ ಇನ್ನಷ್ಟು ಮಾಹಿತಿಗಳು ಬಹಿರಂಗಗೊಳ್ಳುವ ನಿರೀಕ್ಷೆ ಇದೆ.
ಇವರ ಜೊತೆಗೆ ಇನ್ನಷ್ಟು ವ್ಯಕ್ತಿಗಳು ಬಂಧನವಾಗುವ ಸಾಧ್ಯತೆಗಳಿವೆ