ಪುತ್ತೂರು,ಮಾ 20(MSP): ಸ್ವಪಕ್ಷೀಯರ ವಿರೋಧ ನಡುವೆಯೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಮತ್ತೆ ಪಡೆಯಲು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಬಹುತೇಕ ಯಶಸ್ವಿಯಾಗಿದ್ದು, ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಶೋಭಾ ಕರಂದ್ಲಾಜೆ ಬುಧವಾರ ತನ್ನ ಹುಟ್ಟೂರಿನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಹಿಂದಿನಿಂದಲೂ ಪ್ರತಿ ಚುನಾವಣೆಯ ಸಂದರ್ಭ ನಾಮಪತ್ರ ಸಲ್ಲಿಸುವ ಮೊದಲು ತನ್ನ ಹುಟ್ಟೂರಾದ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವುದು ಅವರು ರೂಢಿಸಿಕೊಂಡು ಬಂದ ಪದ್ದತಿ.
ಇಂದು ಬೆಳಿಗ್ಗೆ 7 ಗಂಟೆಯ ಪೂಜೆಯ ಸಮಯಕ್ಕೆ ಶೋಭಾ ಕರಂದ್ಲಾಜೆ ತನ್ನ ತಾಯಿ ಪೂವಕ್ಕ, ಸಹೋದರ ಲಕ್ಷ್ಮಣ ಕರಂದ್ಲಾಜೆ ಸಹಿತ ಹಲವು ಬಿಜೆಪಿ ಕಾರ್ಯಕರ್ತರೊಂದಿಗೆ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಅಲ್ಲಿಂದ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ ತೆರಳಿ ಪೂಜೆ ಸಲ್ಲಿಸಿ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಪ್ರಾರ್ಥನೆ ಸಲ್ಲಿಸಿದರು.
ಶೋಭಾ ಕರಂದ್ಲಾಜೆ ಮಾರ್ಚ್ 26 ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.