ಕುಂದಾಪುರ, ಮಾ 19 (DaijiworldNews/DB): ಬಿಜೆಪಿ ಭಾರತದ ನಕಾಶೆಯ ಚಿತ್ರ ಬರೆದು ಕಿರೀಟ ಮತ್ತು ವೇಷ ತೊಟ್ಟ ಮಹಿಳೆಯ ಕೈಯಲ್ಲಿ ರಾಷ್ಟ್ರಧ್ವಜವನ್ನು ಇಟ್ಟು ಭಾರತ ಮಾತೆ ಎನ್ನುತ್ತದೆ. ಆದರೆ ಕಾಂಗ್ರೆಸ್ ನಮ್ಮ ದೇಶದ ಪ್ರತಿಯೊಬ್ಬ ಹೆಣ್ಣು ಮಗಳನ್ನೂ ಭಾರತಮಾತೆ ಎಂದು ಗೌರವಿಸುತ್ತದೆ ಎಂದು ಕಾಂಗ್ರೆಸ್ ಮುಖಂಡೆ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸಹನಾ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಭಾನುವಾರ ಮಾತನಾಡಿದರು.
ಕಾರ್ಪೋರೇಟ್ ಕಂಪೆನಿಗಳ ಏಜೆಂಟ್ನಂತೆ ವರ್ತಿಸುತ್ತಿರುವ ಬಿಜೆಪಿಗೆ ಈ ಬಾರಿ ಕರ್ನಾಟಕದ ಮಹಿಳಾ ಮತದಾರರು ಉತ್ತರ ನೀಡುತ್ತಾರೆ. ಕಾಂಗ್ರೆಸ್ ಯಾವತ್ತೂ ಬಡವರ ಪರ ಎನ್ನುವುದನ್ನು ಭೂ ಸುಧಾರಣೆ ಮಸೂದೆಯ ಮೂಲಕ ಜಗತ್ತಿಗೇ ಸಾರಿದೆ ಎಂದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಬೆಲೆಯೇರಿಸುತ್ತಾ, ಪ್ರಶ್ನಿಸಿದರೆ ಪ್ರತಿ ಮನೆಯಲ್ಲೂ ನಾಲ್ಕು ವಾಹನಗಳಿವೆ, ಬಡವರು ಯಾರೂ ಇಲ್ಲ ಎನ್ನುತ್ತಿದೆ. ಭಾರತದ ಬಡ ಮಹಿಳೆಯರು ಬಿಜೆಪಿ ಕಣ್ಣಿಗೆ ಕಾಣುತ್ತಿಲ್ಲ. ಬಡವರ ತೆರಿಗೆ ಹಣದಲ್ಲಿ ಶ್ರೀಮಂತರನ್ನು ಸಾಕುತ್ತಿದೆ. ಹಾಗಾಗಿ ಬಿಜೆಪಿ ಏನಿದ್ದರೂ ಶ್ರೀಮಂತರ ಪಕ್ಷ ಎಂದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ವರೆನಿಕಾ ಕರ್ನೆಲಿಯೋ ಮಾತನಾಡಿ, ಕುಂದಾಪುರದಲ್ಲಿ ಮೊದಲ ಬಾರಿಗೆ ಮಹಿಳೆಯರು ಸಮಾವೇಶಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಕೊರೊನಾದಂತಹಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿದ್ಧರಾಮಯ್ಯ ಆರಂಭಿಸಿದ ಅನ್ನಭಾಗ್ಯ ನಮ್ಮ ಕೈ ಹಿಡಿದಿದೆಯೇ ಹೊರತು ಬಿಜೆಪಿ ನಾಯಕರು ಬಾರಿಸಿದ ಗಂಟೆ ಜಾಗಟೆಗಳಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಅದನ್ನೂ ಕಿತ್ತುಕೊಂಡಿರುವ ಬಿಜೆಪಿ ಸರ್ಕಾರ 5 ಕೆಜಿಗಳಿಗೆ ಕಡಿತ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್, ಪ್ರತೀ ಕುಟುಂಬದ ಮಹಿಳಾ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿಗಳು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆಜಿ ಅಕ್ಕಿ ನೀಡುವ ಕಾಂಗ್ರೆಸ್ ನ ಮೂರು ಗ್ಯಾರೆಂಟಿಗಳನ್ನು ಘೋಷಿಸಿದರು.
ಕುಂದಾಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ರೇಖಾ ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕುಂದಾಪುರ ಪುರಸಭೆಯ ನಗರ ಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಕೋಳ್ಳೆರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಶ್ಯಾಮಲಾ ಭಂಡಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ್ ಪೂಜಾರಿ ಬೀಜಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೆಪಿಸಿಸಿ ಸದಸ್ಯ ಎಂ.ಎ. ಗಫೂರ್ ಮತ್ತಿತರರು ಉಪಸ್ಥಿತರಿದ್ದರು.
ಆಶಾ ಕರ್ವಾಲ್ಲೋ ವಂದಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.