ಬಂಟ್ವಾಳ, ಮಾ 18(DaijiworldNews/MS): ಅಮ್ಟಾಡಿ ಗ್ರಾಮದ ಕಜಿಪಿತ್ಲು ಎಂಬಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದು, ಜನತೆ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಈ ಪ್ರದೇಶದಲ್ಲಿ ಗ್ರಾಮ ಪಂಚಾಯತಿನಿಂದ ಯಾವುದೇ ನೀರಿನ ಸಂಪರ್ಕ ವ್ಯವಸ್ಥೆ ಇಲ್ಲವಾಗಿದ್ದು ಬೇಸಗೆಯ ಬಿಸಿ ಕಾಡತೊಡಗಿದೆ.
ಹರ್ ಘರ್ ಜಲವಿಲ್ಲ.!
ಪ್ರತೀ ಗ್ರಾಮದ ಪ್ರತೀ ಮನೆ ಮನೆಗೆ ನೀಡಬೇಕಾದ ನೀರಿನ ಯೋಜನೆ ಕೇಂದ್ರ ಸರಕಾರದ ಜಲಜೀವನ್ ಮಿಷನ್ ಆಶಯದಂತೆ ಹರ್ ಘರ್ ಜಲ್ ಯೋಜನೆ ಈ ಗ್ರಾಮದಲ್ಲೂ ಅನುಷ್ಠಾನಗೊಂಡಿದೆ. ಪ್ರತೀ ಮನೆಗೂ ನಳ್ಳಿ ಸಂಪರ್ಕ ಇದೆ ಎಂಬ ಘೋಷಣೆಯನ್ನೂ ಇಲ್ಲಿನ ಗ್ರಾ.ಪಂ.ಆಡಳಿತ ಮಾಡಿದೆ. ಆದರೆ ನೀರಿನ ಹಾಹಾಕಾರ ಕಡಿಮೆಯಾಗಿಲ್ಲ. ಪ್ರತೀ ಗ್ರಾಮದ ಪ್ರತೀ ಮನೆ ಮನೆಗೆ ನೀಡಬೇಕಾದ ನೀರಿನ ಸಂಪರ್ಕವೂ ಈ ಪ್ರದೇಶಕ್ಕೆ ಆಗದಿರುವುದು ಇದಕ್ಕೆ ಮುಖ್ಯ ಕಾರಣವೆನ್ನಲಾಗಿದೆ.
ಕಳೆದ ವರ್ಷಗಳಿಂದ ತಡ್ಯಾಲ್ ಬಳಿಯ ಒಂದು ಮನೆಯ ಬಾವಿಯ ನೀರನ್ನು ನಂಬಿದ್ದರು. ಆದರೆ ಆ ಬಾವಿಯ ನೀರು ಕೂಡಾ ಉರಿ ಬಿಸಿಲಿಗೆ ಬತ್ತಿ ಹೋಗಿದೆ. ಇದರಿಂದ ಆ ಊರಿನ ಜನರು ಕಂಗಾಲಾಗಿದ್ದಾರೆ.
ದ.ಕ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಳೆದ ಡಿಸೆಂಬರ್ನಲ್ಲಿ ಅಮ್ಟಾಡಿ ಗ್ರಾಮ ಮತ್ತು ಕೂರಿಯಾಳ ಗ್ರಾಮದಲ್ಲಿ ಜಲಜೀವನ್ ಮಿಷನ್ ಆಶಯದಂತೆ ಎಲ್ಲಾ ಮನೆಗಳಿಗೂ ನಳ್ಳಿ ಸಂಪರ್ಕ ಕಲ್ಪಿಸಲಾಗಿದ್ದು, ಅಮ್ಟಾಡಿ ಗ್ರಾಮ ಪಂಚಾಯತಿ ತನ್ನ ಗುರಿ ಮುಟ್ಟಿದ್ದು, ಡಿಸೆಂಬರ್ 29 ರಂದು ಹರ್ಘರ್ಜಲ್ ಗ್ರಾಮವಾಗಿ ಘೋಷಣೆಯನ್ನೂ ಮಾಡಿತ್ತು. ಆದರೆ ಗ್ರಾಮದಲ್ಲಿ ಯಾವ ಕಡೆಯೆಲ್ಲಾ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾರೆಂಬ ಸರ್ವೆಯನ್ನೂ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಮ್ಮ ಊರಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ. ಇಲ್ಲಿನ ಜನರು ನಿತ್ಯ ಜೀವನಕ್ಕೆ ನೀರಿಗಾಗಿ ನರಕಯಾತನೆ ಪಡುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದು, ಗ್ರಾ.ಪಂ.ಆಡಳಿತ, ತಾಲೂಕು ಆಡಳಿತ ತಕ್ಷಣ ಗ್ರಾಮದ ನೀರ ಬವಣೆ ನೀಗಿಸಬೇಕಾಗಿದೆ.