ಕಾಸರಗೋಡು, ಮಾ 18(DaijiworldNews/MS): ದೌರ್ಜನ್ಯಕ್ಕೊಳಗಾಗುವ ಮಹಿಳೆಯರು ಮತ್ತು ಮಕ್ಕಳಿಗಿರುವ ಆಶ್ರಯ ಕೇಂದ್ರ ಸಖಿ ಒನ್ ಸ್ಟಾಪ್ ಸೆಂಟರ್, ಪ್ರತಿ ಜಿಲ್ಲೆಯಲ್ಲೂ ಸ್ವಂತ ಕಟ್ಟಡ ಹೊಂದುವ ಗುರಿ ಹೊಂದಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದರು.
ಅವರು ಶನಿವಾರ ಕಾಸರಗೋಡು ಅಣಂಗೂರಿನಲ್ಲಿ ನಿರ್ಮಿಸಲಾದ ಸಖಿ ಒನ್ ಸ್ಟಾಪ್ ಸೆಂಟರ್ ನ್ನು ಸಚಿವೆ ವೀಣಾ ಜಾರ್ಜ್ ಆನ್ಲೈನ್ನಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಮತ್ತು ದೌರ್ಜನ್ಯದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. ಸಖಿ ಒನ್ ಸ್ಟಾಪ್ ಸೆಂಟರ್, ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಬೆಂಬಲ ಮತ್ತು ಕಾಳಜಿಯನ್ನು ಒದಗಿಸುವ ಒಂದು-ನಿಲುಗಡೆಯ ತಾಣವಾಗಿದೆ. ಆಶ್ರಯವಾಗಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಸಖಿ ಒನ್ ಸ್ಟಾಪ್ ಕೇಂದ್ರಕ್ಕೆ ಸ್ವಂತ ಕಟ್ಟಡ ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.ಇದಕ್ಕೆ ಅಗತ್ಯವಾದ ಕ್ರಮಗಳು ಪ್ರಗತಿಯಲ್ಲಿವೆ ಎಂದರು
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಮತ್ತು ದೌರ್ಜನ್ಯದಿಂದ ಬದುಕುಳಿದವರಿಗೆ ವೈದ್ಯಕೀಯ ನೆರವು, ಕೌನ್ಸಿಲಿಂಗ್ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ರಕ್ಷಣೆ ಮತ್ತು ಸುರಕ್ಷಿತ ಆಶ್ರಯದಂತಹ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು 24 ಗಂಟೆ ಕಾರ್ಯಾಚರಿಸುವ ಸಖಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದರು. ಪ್ರತ್ಯೇಕವಾಗಿ ಇರುವವರು. ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ 580 ಪ್ರಕರಣಗಳು ಸಖಿ ಒನ್ ಸ್ಟಾಪ್ ಸೆಂಟರ್ ಮೂಲಕ ದಾಖಲಾಗಿವೆ. 336 ಪ್ರಕರಣಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿವೆ. 14 ಪೋಕ್ಸೊ ಪ್ರಕರಣಗಳಾಗಿವೆ. 50 ಪ್ರಕರಣಗಳಿಗೆ ಪೊಲೀಸ್ ನೆರವು ನೀಡಲಾಗಿದೆ. 27 ಮಂದಿಗೆ ಕೌನ್ಸೆಲಿಂಗ್ ನೀಡಲಾಗಿದೆ. 46 ಮಂದಿಗೆ ಕಾನೂನು ನೆರವು ನೀಡಲಾಗಿದೆ. 19 ಮಂದಿಗೆ ವೈದ್ಯಕೀಯ ನೆರವನ್ನು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಅಣಂಗೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟನಾ ಫಲಕವನ್ನು ಅನಾವರಣಗೊಳಿಸಿದರು. ವಿಡಿಯೋ ಕಾನ್ಫರೆನ್ಸ್ ಕೊಠಡಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರದ ಜನರಲ್ ಇ.ಪಿ.ರಾಜಮೋಹನ್, ಉದ್ಘಾಟಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಜಿ.ಪ್ರಿಯಾಂಕಾ ಆನ್ ಲೈನ್ ನಲ್ಲಿ ಮಾತನಾಡಿದರು. ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈನಿ ಐಸಾಕ್, ಜಿಲ್ಲಾ ಐಸಿಡಿಎಸ್ ಕಾರ್ಯಕ್ರಮಾಧಿಕಾರಿ ಸಿ.ಸುಧಾ, ರಾಜ್ಯ ನಿರ್ಭಯ ಕೋಶದ ಕಾರ್ಯಕ್ರಮಾಧಿಕಾರಿ ಎಂ.ಪ್ರಭಾ, ಕೌನ್ಸಿಲರ್ ಸಮೀರಾ ಅಬ್ದುಲ್ ರಜಾಕ್ ಮಾತನಾಡಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ ಸ್ವಾಗತಿಸಿ, ಮಹಿಳಾ ರಕ್ಷಣಾಧಿಕಾರಿ ಪಿ.ಜ್ಯೋತಿ ವಂದಿಸಿದರು. ಜಿಲ್ಲಾ ಸರಬರಾಜು ಅಧಿಕಾರಿ ಶೈಜುಮೋನ್, ಲೋಕೋಪಯೋಗಿ ಕಟ್ಟಡ ಇಲಾಖೆ ಸಹಾಯಕ ಎಂಜಿನಿಯರ್ ಅನಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೌಕರರು ಭಾಗವಹಿಸಿದ್ದರು