ಮಂಗಳೂರು,ಮಾ 18(DaijiworldNews/MS): ಅಪಘಾತ ವೃತ್ತ ಎಂದೇ ಹಣೆಪಟ್ಟಿ ಅಂಟಿಕೊಂಡಿರುವ ನಗರದ ನಂತೂರು ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ 12.15ರ ವೇಳೆಗೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಲ್ತಾನ್ಬತ್ತೇರಿ ನಿವಾಸಿ ಸ್ಯಾಮುಯೆಲ್ ಜೇಸುದಾಸ್ (66) ಹಾಗೂ ಅವರ ಸೊಸೆ ಶೃತಿ ಅವರ ದೊಡ್ಡಮ್ಮನ ಮಗಳು ಭೂಮಿಕಾ (17) ಮೃತಪಟ್ಟವರು. ಪಂಪ್ವೆಲ್ ಕಡೆಯಿಂದ ಬಂದ ಟಿಪ್ಪರ್ ಅದೇ ಮಾರ್ಗದಲ್ಲಿ ಮುಂದೆ ಇದ್ದ ಆಕ್ಟೀವಾ ಸ್ಕೂಟರ್ಗೆ ನಂತೂರು ಸರ್ಕಲ್ ಬಳಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ನಲ್ಲಿದ್ದ ಸ್ಯಾಮುಯೆಲ್ ಹಾಗೂ ಭೂಮಿಕಾ ಕೆಳಕ್ಕೆ ಬಿದ್ದಿದ್ದು, ಈ ವೇಳೆ ಇಬ್ಬರ ತಲೆಯ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಇದರಿಂದ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆನ್ಲಾಕ್ ಆಸ್ಪತ್ರೆಗೆ ಇಬ್ಬರನ್ನು ಸಾಗಿಸಲಾಗಿದ್ದು, ವೈದ್ಯರು ಅವರು ಮೃತಪಟ್ಟಿರುವುದನ್ನು ಧೃಢಪಡಿಸಿದ್ದಾರೆ.
ಘಟನೆಗೆ ಟಿಪ್ಪರ್ ಚಾಲಕ ಸತೀಸ್ ಗೌಡ ಪಾಟೀಲ್ನ ಅಜಾಗರೂಕತೆಯೇ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನಿಗೆ ಧರ್ಮದೇಟು
ಇನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಇಬ್ಬರ ಸಾವಿಗೆ ಕಾರಣನಾದ ಟಿಪ್ಪರ್ ಚಾಲಕನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದು, ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ನಂತೂರಿನಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.