ಕುಂದಾಪುರ, ಮಾ 17 (DaijiworldNews/DB): ಒಂದಷ್ಟು ಮಾನವೀಯತೆ ನಮ್ಮಲ್ಲಿ ಉಳಿದುಕೊಂಡಿದೆ ಎನ್ನುವುದಕ್ಕೆ ಗಂಗೊಳ್ಳಿಯ ಪೊಲೀಸರು, ಕುಂದಾಪುರ ಆದರ್ಶ ಆಸ್ಪತ್ರೆಯ ಆಡಳಿತ ಹಾಗೂ ಆಪದ್ಭಾಂಧವ ಇಬ್ರಾಹಿಂ ಗಂಗೊಳ್ಳಿ ಸಾಕ್ಷಿಯಾಗಿದ್ದಾರೆ!
ಕಳೆದ ಶುಕ್ರವಾರ ತ್ರಾಸಿ ಬೀಚ್ ಬಳಿಯ ಗೂಡಂಗಡಿಯ ಎದುರು ಮಾನಸಿಕ ಅಸ್ವಸ್ಥ ಹಾಗೂ ಅನಾರೋಗ್ಯ ಪೀಡಿತ ಅಪರಿಚಿತ ಯುವಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಕ್ರೈಂ ಎಸೈ ಜಯಶ್ರೀ ಹೊನ್ನೂರ ಹಾಗೂ ಚಾಲಕ ದಿನೇಶ್ ಗಮನಿಸಿದ್ದಾರೆ. ತಕ್ಷಣ ಆಪದ್ಭಾಂಧವ 24x7 ಅಂಬ್ಯುಲೆನ್ಸ್ ನ ಇಬ್ರಾಹಿಂ ಗಂಗೊಳ್ಳಿ, ಸ್ವಯಂಸೇವಕರಾದ ನದೀಮ್, ಅಬ್ರಾರ್, ಲಿಪ್ಟನ್ ಸಹಕಾರದೊಂದಿಗೆ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ವೈದ್ಯರಾಗಿಯೂ ಸಮಾಜಸೇವಕರೆನ್ನಿಸಿಕೊಂಡ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆದರ್ಶ ಹೆಬ್ಬಾರ್ ತಮ್ಮ ಸಿಬ್ಬಂದಿ ವರ್ಗದ ಮೂಲಕ 6 ದಿನಗಳ ಕಾಲ ಚಿಕಿತ್ಸೆ ಹಾಗೂ ಆರೈಕೆ ಮಾಡಿ, ಇಂದು ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರು. ಬಳಿಕ ಗಂಗೊಳ್ಳಿ ಠಾಣಾಧಿಕಾರಿ ವಿನಯ ಕೊರ್ಲಹಳ್ಳಿ ಹಾಗೂ ಜಯಶ್ರೀ ಹೊನ್ನೂರ ಇವರು ಆಶ್ರಮಗಳಿಗೆ ಸಂಪರ್ಕಿಸಿದ್ದಾರೆ. ಈ ಸಂದರ್ಭ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಜೋಸೆಫ್ ಕ್ರಾಸ್ತಾ ಪುನರ್ವಸತಿ ಕಲ್ಪಿಸಲು ಒಪ್ಪಿಕೊಂಡಿದ್ದಾರೆ. ಬಳಿಕ ಹರೀಶ್ ಕೊಡಪಾಡಿ, ಮಂಜುನಾಥ್ ಸಾಲಿಯಾನ್ ತ್ರಾಸಿ, ಇವರ ಸಹಕಾರದಿಂದ ಸದ್ಯ ಮಾನಸಿಕ ಅಸ್ವಸ್ಥ ಯುವಕನನ್ನು 24x7 ಆಂಬ್ಯುಲೆನ್ಸ್ ಚಾಲಕ ಕೃಷ್ಣ (ಕಿಟ್ಟ) ಹಾಗೂ ಇಬ್ರಾಹಿಂ ಅವರು ಸ್ನೇಹಾಲಯಕ್ಕೆ ಬಿಟ್ಟು ಬಂದಿದ್ದಾರೆ. ಅಂದ ಹಾಗೇ ಈ ಯುವಕ ತನ್ನ ಹೆಸರನ್ನು ಚೋಟು ಕುಮಾರ್ ಎಂದಷ್ಟೇ ಹೇಳುತ್ತಿದ್ದು, ಉಳಿದ ಮಾಹಿತಿ ಸಿಕ್ಕಿಲ್ಲ.