ಕುಂದಾಪುರ, ಮಾ 20(MSP): ದೇಶದಾದ್ಯಂತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಿದ್ದರೂ ಅದು ಲೆಕ್ಕಕ್ಕಿಲ್ಲ. ನಮ್ಮ ಅಭ್ಯರ್ಥಿ ನರೇಂದ್ರ ಮೋದಿ ಅಷ್ಟೇ. ಅವರ ಕೈ ಬಲಪಡಿಸುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಷ್ಟೇ ನಮ್ಮ ಗುರಿಯಾಗಬೇಕು ಎಂದು ಮಾಜಿ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಾ.19ರ ಮಂಗಳವಾರ ಕುಂದಾಪುರದ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಪೂರ್ವಭಾವಿ ಸಭೆಯಲ್ಲಿ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಹೈಕಮಾಂಡ್ ಸ್ಪಷ್ಟಪಡಿಸಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿ ಯಾರೆನ್ನುವುದಕ್ಕಿಂತ ಮೋದಿಯೇ ಅಭ್ಯರ್ಥಿ ಎನ್ನುವ ಅಂಶವನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು. ಆ ಮೂಲಕ ನಮ್ಮ ಅಭ್ಯರ್ಥಿಯನ್ನು ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಹೇಳಿದರು. ಅದಕ್ಕಾಗಿ ಮೋದಿಯವರನ್ನೇ ಮುಂದೆ ತರಬೇಕು ಮತ್ತು ಬಿಜೆಪಿ ಚಿಹ್ನೆಯಾದ ಕಮಲದ ಗುರುತನ್ನು ಸ್ಪಷ್ಟಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುರೇಶ ಶೆಟ್ಟಿ ಕಾಡೂರು, ಅಧ್ಯಕ್ಷರು, ಬಿಜೆಪಿ ಕುಂದಾಪುರ, ಸಂಧ್ಯಾ ರಮೇಶ್, ನಳಿನಿ ಪ್ರದೀಪ್, ಸದಾನಂದ್ ಬಳ್ಕೂರು, ಗಣಪತಿ ಟಿ. ಶ್ರೀಯಾನ್, ಲಕ್ಷ್ಮಿ ಮಂಜು ಬಿಲ್ಲವ, ಸತೀಶ್ ಪೂಜಾರಿ ಉಪಸ್ಥಿತರಿದ್ದರು. ಶಂಕರ್ ಅಂಕದಕಟ್ಟೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸುರೇಶ ಶೆಟ್ಟಿ ಕಾಡೂರು, ಅಧ್ಯಕ್ಷರು, ಬಿಜೆಪಿ ಕುಂದಾಪುರ ಪ್ರಾಸ್ತವಿಕ ಮಾತನಾಡಿದರು.