ಉಡುಪಿ, ಮಾ 17(DaijiworldNews/MS): ಇತ್ತೀಚಿನ ಬಜೆಟ್ ಗಳಲ್ಲಿ ಬಂಟ ಸಮುದಾಯಕ್ಕೆ ಯಾವುದೇ ರೀತಿಯ ಅನುದಾನವನ್ನು ನೀಡದಿರುವುದು ಬೇಸರದ ಸಂಗತಿ” ಎಂದು ಶ್ರೀ ಬಾರ್ಕೂರು ಮಹಾಸಂಸ್ಥಾನದ ಶ್ರೀ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ.
ಬಾರ್ಕೂರು ಮಹಾಸಂಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು “ಸಮಾಜದ ಅಭಿವೃದ್ದಿಗಾಗಿ ಯೋಜನೆಗಳನ್ನು ರೂಪಿಸರುವುದು ಕೂಡಾ ಕಂಡು ಬಂದಿಲ್ಲ. ಆದರೆ ನಾವು ಅವರ ವಿರುದ್ದ ಭಾವನೆಯನ್ನು ವ್ಯಕ್ತಪಡಿಸುತಿಲ್ಲ. ಮುಂದಿನ ದಿನಗಳಲ್ಲಾದರೂ ಅವರು ಅದನ್ನು ತಿದ್ದಿಕೊಂಡು ಈ ಸಮಾಜವನ್ನು ಗುರುತಿಸಬೇಕು. ಸರಕಾರ ನಮ್ಮ ಸಮಾಜವನ್ನು ಮನಗಾಣಬೇಕು. ಬಂಟರು, ಪರಿವಾರ ಬಂಟರು, ನಾಡ ಒಕ್ಕಲಿಗರು, ನಾಡವರು, ನಾಡ ಬಂಟರು ಸೇರಿರುವ ಇಷ್ಟು ದೊಡ್ಡ ಸಮುದಾಯಕ್ಕೆ ಅಭಿವೃದ್ದಿ ನಿಗಮ ಕೂಡಾ ಇಲ್ಲ. ಎಲ್ಲಾ ಸಮಾಜಗಳಿಗೆ ಅಭಿವೃದ್ದಿ ನಿಗಮಗಳನ್ನು ಮಾಡಲಾಗಿದೆ, ನಮ್ಮ ಸಮುದಾಯದಲ್ಲಿ 75 ಶೇಕಡಾ ಜನ ಬಡವರು ಇದ್ದಾರೆ ಎಂಬುವುದನ್ನು ಸರಕಾರ ಮನಗಂಡು ಶೀಘ್ರದಲ್ಲಿ ಬಂಟರ ಯಾನೆ ನಾಡವರ ಅಭಿವೃದ್ದಿ ನಿಗಮವನ್ನು ಜಾರಿಗೆ ತರಬೇಕು. ಮಾತ್ರವಲ್ಲದೇ ಬಂಟ ಸಮುದಾಯದ ಎಲ್ಲರಿಗೆ 2ಎ ಮೀಸಲಾತಿ ಯಡಿಯಲ್ಲಿ ತರಬೇಕು. ಈಗಿರುವ ಸರಕಾರ ಆದಷ್ಟು ಶೀಘ್ರದಲ್ಲಿ ಇದನ್ನು ತಂದರೆ ಬಹಳ ಸಂತೋಷ, ಮುಂದೆ ಯಾವ ಪಕ್ಷ ಬರುತ್ತದೆ ಎಂದು ದೈವಗಳಿಗೆ ಗೊತ್ತಿದೆ, ಆದಷ್ಟು ಶೀಘ್ರದಲ್ಲಿ ಇದನ್ನು ತರಬೇಕು" ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ವಿಶ್ವಸ್ಥ ಮಂಡಳಿಯ ಪದಗ್ರಹಣ ಮತ್ತು ಪ್ರಮಾಣ ವಚನ ಕೂಡಾ ನಡೆಯಿತು. ಕೆ.ಎಮ್.ಶೆಟ್ಟಿ ಅಧ್ಯಕ್ಷ ರಾಗಿ, ಬಿ ಅಪ್ಪಣ್ಣ ಹೆಗ್ಡೆ ಉಪಾಧ್ಯಕ್ಷರು, ಡಾಕ್ಟರ್ ಎಂ ಮೋಹನ್ ಆಳ್ವ ಕಾರ್ಯಕಲಾಪಗಳ ಚೇರ್ಮನ್, ನಾಗರಾಜ ನಾಯಕ್ ಕಾರ್ಯದರ್ಶಿ, ಬೇಳೂರು ರಾಘವೇಂದ್ರ ಶೆಟ್ಟಿ ಜಂಟಿ ಕಾರ್ಯದರ್ಶಿ, ಮನೋಹರ್ ಶೆಟ್ಟಿ ಕೋಶಾಧಿಕಾರಿ, ಪಟ್ಲ ಸತೀಶ್ ಶೆಟ್ಟಿ ಸಾಂಸ್ಕೃತಿಕ ರಾಯಭಾರಿ, ಮತ್ತು ಸಂತೋಶ್ ಶೆಟ್ಟಿ ಪೂನಾ ಇವರನ್ನು ಸಂಘಟನಾ ಕಾರ್ಯದರ್ಶಿ ಯಾಗಿ ನೇಮಿಸಲಾಯಿತು.