ಮಂಗಳೂರು, ಮಾ 16 (DaijiworldNews/MS): ರಬ್ಬರ್ ಟ್ಯಾಪಿಂಗ್ ಮಾಡುವ ಕಾರ್ಮಿಕರಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಮೂಲಕ ಬೋನಸ್ನ್ನು ಕೋವಿಡ್ ಪೂರ್ವದಲ್ಲಿ ಇದ್ದಂತೆ ಶೇ 20ರಷ್ಟು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಫಲಾನುಭಾವಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಬ್ಬರ್ ಕಾರ್ಮಿಕರಿಗೆ ಕೋವಿಡ್ ಸಮಯದಲ್ಲಿ ಬೋನಸನ್ನು 8ರಷ್ಟು ಕಡಿತ ಮಾಡಲಾಗಿತ್ತು. ಈಗ 12ರಷ್ಟು ನೀಡಲಾಗುತ್ತಿದೆ. ಇದನ್ನು ಮತ್ತೆ 20ಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಈ ನಡುವೆ ಲಕ್ಷದ್ವೀಪ ಮತ್ತು ಮಂಗಳೂರು ನಡುವೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿಯನ್ನು ನಿರ್ಮಿಸುವ ಭರವಸೆಯನ್ನು ಕೂಡ ಮುಖ್ಯಮಂತ್ರಿಗಳು ನೀಡಿದ್ದಾರೆ. ಈ ವರ್ಷ ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈಗೆ ಜನಸಾಮಾನ್ಯರಿಗೆ ದಿನನಿತ್ಯ ಜಲಮಾರ್ಗ ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಕರಾವಳಿ ಭಾಗ ಬಹಳಷ್ಟು ಅಭಿವೃದ್ಧಿಯಾಗಬೇಕು. ಕರಾವಳಿ ಭಾಗ ಅಭಿವೃದ್ಧಿಯಾದರೆ ರಾಜ್ಯದ ಜಿಡಿಪಿ ಜಾಸ್ತಿಯಾಗುತ್ತಿದೆ. ಇಲ್ಲಿನ ಯುವಕರಿಗೆ ಕೆಲಸ ಸಿಕ್ಕಿದರೆ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗಬಹುದು. ಕರಾವಳಿಯ ಅಭಿವೃದ್ಧಿಯಲ್ಲಿ ಕನ್ನಡ ನಾಡಿನ ಅಭಿವೃದ್ಧಿ ಮತ್ತು ತುಳುನಾಡಿನ ಅಭಿವೃದ್ಧಿ ಇದೆ ಎಂದರು.
ಮೀನುಗಾರರ, ಕೃಷಿಕರ ನೆರವಿಗೆ ಸರಕಾರದ ಯಾವಾಗಲೂ ಸಿದ್ಧವಿದೆ. ಎಸ್ಸಿ ಮತ್ತು ಎಸ್ಟಿ ಜನಾಂಗಕ್ಕೆ ಪ್ರತಿಯೊಂದು ಕ್ಷೇತ್ರದಲ್ಲೂ ಯುವಕರಿಗೆ 100 ವಾಹನಗಳನ್ನು ಒದಗಿಸುತ್ತದೆ. 4,000 ಅಂಗನವಾಡಿ, ಸರಕಾರಿ ಶಾಲೆಗಳಿಗೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಮುಂದಿನ ಆಗಸ್ಟ್ 15ರೊಳಗೆ ಟಾಯ್ಲೆಟ್ ಒದಗಿಸಲಾಗುವುದು ಎಂಬ ಭರವಸೆಯನ್ನು ಫಲಾನುಭಾವಿಗಳ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ನೀಡಿದ್ದಾರೆ.