ಉಳ್ಳಾಲ, ಮಾ 16 (DaijiworldNews/SM): ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲದ ಕೋಟೆಪುರ ಬಸ್ ನಿಲ್ದಾಣದ ಸಮೀಪ ಸಂಜೆ ವೇಳೆ ಬೆಳಕಿಗೆ ಬಂದಿದೆ. ಈಕೆಯ ಜತೆಗಿದ್ದ ದೆಹಲಿ ಮೂಲದ ಯುವಕ ಮೊಬೈಲ್ ಸ್ವಿಚ್ ಆಫ್ ನಡೆಸಿ ತಲೆಮರೆಸಿಕೊಂಡಿದ್ದಾನೆ.
ದೆಹಲಿ ಮೂಲದ 35-40 ರ ಹರೆಯದ ಮಹಿಳೆ ಹತ್ಯೆ ನಡೆದಿದೆ. ಈಕೆ ಜತೆಗಿದ್ದ ಅದೇ ಊರಿನ ನಯೀಮ್ (30) ಎಂಬಾತ ತಲೆಮರೆಸಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ , ಸ್ಥಳೀಯ ಸೆಲೂನ್ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಸಂಪರ್ಕಿಸಿ, ಕೋಟೆಪುರ ಬಸ್ ನಿಲ್ದಾಣದ ಬಳಿಯಿರುವ ಹಮೀದ್ ಎಂಬವರ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು. ಮನೆಗೆ ಬರುವಾಗ ಇಬ್ಬರೂ ಮಕ್ಕಳ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿದ್ದು, ಇನ್ನೇನು ಬಟ್ಟೆಗಳ ಲೋಡ್ ಬರಬೇಕಿದೆ ಎಂದು ತಿಳಿಸಿ ಮನೆಯಲ್ಲಿದ್ದರು. ನಿನ್ನೆ ರಾತ್ರಿ ನಂತರ ಇಬ್ಬರೂ ಹೊರಬಾರದೇ ಇರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಮನೆ ಬಾಗಿಲು ತೆಗೆಯಲು ಮುಂದಾದಾಗ ಚಿಲಕ ಹಾಕದೇ ಇದ್ದು, ಒಳಪ್ರವೇಶಿಸಿದಾಗ ಚಾಪೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಮಹಿಳೆ ಮೃತದೇಹ ಶೌಚಾಲಯದೊಳಕ್ಕೆ ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಕೃತ್ಯಕ್ಕೆ ಬಳಸಲಾದ ಚೂರಿ ಕೂಡಾ ಪತ್ತೆಯಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿ ಸ್ಥಳಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕಾಗಮಿಸಿ ಮಾಹಿತಿಯನ್ನು ಪಡೆದುಕೊಂಡಿದೆ.
ಬಾಡಿಗೆ ಮನೆ ಮಾಲೀಕರು ಯಾವುದೇ ಗುರುತಿನ ಚೀಟಿಯನ್ನು ಪಡೆದುಕೊಳ್ಳದೇ ಇರುವುದರಿಂದ ಪೊಲೀಸರಿಗೆ ಮೃತ ಮಹಿಳೆಯ ಗುರುತು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಸ್ಥಳದಲ್ಲಿ ಆರೋಪಿಯ ಆಧಾರ್ ಕಾರ್ಡ್ ದೊರೆತಿದ್ದು, ಇದರಲ್ಲಿ ದೆಹಲಿ ನಿವಾಸಿ ನಯೀಮ್ ಎಂಬ ದಾಖಲೆಗಳಿವೆ. ಪೊಲೀಸರು ಆರೋಪಿತನ ಮೊಬೈಲ್ ನಂಬರ್ ಪರಿಶೀಲಿಸಿದಾಗ ಅದು ಪಶ್ಚಿಮ ಬಂಗಾಳದ ಆಧಾರಗಳನ್ನು ಒಳಗೊಂಡಿದೆ. ಹಾಗಾಗಿ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ಅಸಲಿಯ ಅಥವಾ ನಕಲಿಯ ಅನ್ನುವುದನ್ನು ತನಿಖೆ ನಡೆಸಬೇಕಿದೆ. ಬಾಡಿಗೆ ಮನೆ ಪಡೆಯುವ ಸಂದರ್ಭ ಆರೋಪಿತ ಜತೆಗಿರುವ ಮಹಿಳೆ ತಾಯಿಯ ಸಹೋದರಿ ಎಂದೂ ತಿಳಿಸಿದ್ದು, ಆದರೆ ಇಬ್ಬರ ವಯಸ್ಸಿನಲ್ಲಿ ದೊಡ್ಡ ವ್ಯತ್ಯಾಸ ಕಂಡುಬರುತ್ತಿಲ್ಲ ಅನ್ನುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಕೋಟೆಪುರ ಪರಿಸರದಲ್ಲಿ ಮೀನಿನ ತೈಲ ತೆಗೆಯುವ ಅನೇಕ ಕಾರ್ಖಾನೆಗಳಿವೆ. ಇಲ್ಲಿಗೆ ಹೊರರಾಜ್ಯಗಳ ಕಾರ್ಮಿಕರು ಅನೇಕರು ಬರುತ್ತಿರುತ್ತಾರೆ. ಬಾಡಿಗೆ ಮನೆ ಕೊಡುವವರು ಸೂಕ್ತ ದಾಖಲೆಗಳನ್ನು ಪಡೆದುಕೊಂಡೇ ಬಾಡಿಗೆ ಮನೆಯನ್ನು ನೀಡಬೇಕು ಎಂದು ಉಳ್ಳಾಲ ಠಾಣಾಧಿಕಾರಿ ಸಂದೀಪ್ ತಿಳಿಸಿದ್ದಾರೆ.
3 ಗಂಟೆಗೆ ಪ್ರಕರಣ ಬೆಳಕಿಗೆ , 7 ಗಂಟೆಗೆ ಫಾರೆನ್ಸಿಕ್ ತಂಡದ ಭೇಟಿ
ಪ್ರಕರಣ ಮಧ್ಯಾಹ್ನ 3 ಗಂಟೆ ವೇಳೆಗೆ ಬೆಳಕಿಗೆ ಬಂದಿದೆ. 3.30ರ ಸುಮಾರಿಗೆ ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ಲಭಿಸಿದೆ. ಠಾಣಾಧಿಕಾರಿ ಸಂದೀಪ್ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಾಥಮಿಕ ತನಿಖೆ ಕೈಗೊಂಡು ಮೊಬೈಲ್ ಫಾರೆನ್ಸಿಕ್ ಸೈನ್ಸ್ ಲ್ಯಾಬರೇಟರಿ , ಬೆರಳಚ್ಚು ತಜ್ಞರಿಗೆ ಮಾಹಿತಿಯನ್ನು ನೀಡಲಾಗಿದೆ. ಆದರೆ ತಂಡ ಸ್ಥಳಕ್ಕೆ ಭೇಟಿ ನೀಡುವಾಗ ಸಂಜೆ 7.15 ಆಗಿದೆ. ಬೋಂದೇಲ್ ಕಚೇರಿಯಿಂದ ಉಳ್ಳಾಲ ಕೋಟೆಪುರದ ಘಟನಾ ಸ್ಥಳಕ್ಕೆ 18 ಕಿ.ಮೀ ಇದ್ದು, 30 ನಿಮಿಷಗಳು ತಲುಪಲು ಸಾಕು. ಆದರೂ ಎರಡೂವರೆ ತಾಸು ತಡವಾಗಿ ಬರುವಾಗ ಸ್ಥಳದಲ್ಲಿನ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ ಕೃತ್ಯ ನಡೆದ ಸ್ಥಳಕ್ಕೆ ತಂಡ ಆಗಮಿಸುವಾಗ ಇನ್ಸ್ ಪೆಕ್ಟರ್ ಗ್ರೇಡ್ ನ ವ್ಯಕ್ತಿ ಇರಬೇಕು, ಅಲ್ಲದೆ ಪ್ರತಿಯೊಂದು ಸೊತ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ ವಶಕ್ಕೆ ಪಡೆದುಕೊಳ್ಳಬೇಕಿದೆ. ವಶಕ್ಕೆ ಪಡೆದುಕೊಂಡ ಚರ ಹಾಗೂ ಚಿರ ಸೊತ್ತುಗಳನ್ನೆಲ್ಲಾ ಮುಂದಿಟ್ಟು ಪಂಚ ನಾಮೆ ಐದು ಮಂದಿಯ ಸಮ್ಮುಖದಲ್ಲಿ ಪಡೆದುಕೊಳ್ಳಬೇಕಿದೆ . ಇಂತಹ ಯಾವುದೇ ಪ್ರಕ್ರಿಯೆಗಳನ್ನು ಕೈಗೊಳ್ಳದ ತಂಡ ಛಾಯಗ್ರಾಹಕನೊಬ್ಬನನ್ನು ಛೂಬಿಟ್ಟು ಊರವರನ್ನು ಗದರಿಸಿ ಕಾಟಾಚಾರದ ತನಿಖೆ ನಡೆಸಿದ್ದಾರೆ ಅನ್ನುವುದನ್ನು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಆರೋಪಿಗಳ ಪತ್ತೆಕಾರ್ಯವೂ ಮರೀಚಿಕೆ ಅನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮಂಗಳೂರು ಪೊಲೀಸ್ ಕಮೀಷನರ್ ತಂಡದ ಕುರಿತು ಕ್ರಮಕೈಗೊಳ್ಳಬೇಕು ಅನ್ನುವ ಆಗ್ರಹವೂ ವ್ಯಕ್ತವಾಗಿದೆ.