ಕಾರ್ಕಳ, ಮಾ 15 (DaijiworldNews/SM): ದುರ್ಗ ಗ್ರಾಮದಲ್ಲಿ ಪರಿಸರದಲ್ಲಿ ಹರಿದಾಡುತ್ತಾ ನಾಗರಿಕ ನಿದ್ದೆಗೆಡಿಸಿದ, 17 ಅಡಿ ಉದ್ದದ ಕಾಳಿಂಗವೊಂದನ್ನು ಮಂಗಳವಾರ ತಡರಾತ್ರಿ ಉರಗಪ್ರೇಮಿ ಅನಿಲ್ ಪ್ರಭು ಸೆರೆಹಿಡಿದ್ದಾರೆ.
ಕಳೆದ ಕೆಲ ದಿನಗಳಿಂದ ಇದೇ ಪರಿಸರದಲ್ಲಿ ಕಾಣಸಿಕ್ಕಿರುವ ಕಾಳಿಂಗವನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖಾಧಿಕಾರಿಗೆ ಗ್ರಾಮಸ್ಥರು ದುಂಬಾಲು ಬಿದ್ದಿದ್ದರು. ಗ್ರಾಮಸ್ಥರ ಕೋರಿಕೆ ಮನ್ನಣೆ ಸಿಗದೆ ಇದ್ದಾಗ ಮಂಗಳವಾರ ರಾತ್ರಿ ಸುಮಾರು 10ಗಂಟೆಯ ವೇಳೆಗೆ ಕಾಳಿಂಗ ಕಾಣಸಿಕ್ಕಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಭಯ ಹೆಚ್ಚುಮಾಡಲು ಕಾರಣವಾಗಿತ್ತು.
ಉರಗ ಸೆರೆ ಹಿಡಿಯಲು ಸಮರ್ಪಕ ವ್ಯವಸ್ಥೆ ಇಲ್ಲದೇ ಇರುವುದರಿಂದಾಗಿ ಇಲ್ಲಿಯೂ ಉರಗ ಪ್ರೇಮಿ ಅನಿಲ್ ಪ್ರಭು ಅವರು ಗ್ರಾಮಸ್ಥರ ಕೋರಿಕೆ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿ ಕಾಳಿಂಗ ಸರ್ಪವನ್ನು ತಡ ರಾತ್ರಿ 11 ಗಂಟೆಯ ಹೊತ್ತಿಗೆ ಸೆರೆ ಹಿಡಿದಿದ್ದಾರೆ.
ಅರಣ್ಯ ಇಲಾಖೆಯಲ್ಲಿ ವ್ಯವಸ್ಥೆ ಇಲ್ಲ?!
ತಾಲೂಕು ಮಟ್ಟದಲ್ಲಿ ಅಪಾಯವಾಗಿ ಉರಗಗಳು, ಪ್ರಾಣಿಗಳು ಉಪಟಳ ಅಗ್ಗಿಂದಾಗೆ ವರದಿಯಾಗುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಕಾರ್ಕಳ ವಲಯದಲ್ಲಿ ಅವುಗಳ ಸೆರೆ ಹಿಡಿಯಲು ಅನುಭವ ಹೊಂದಿದವರು ಇಲ್ಲದೇ ಇರುವುದರಿಂದ ಕುದುರೆಮುಖ, ಶಿವಮೊಗ್ಗ ಅರಣ್ಯ ಇಲಾಖಾ ಹಾಗೂ ಮಂಗಳೂರು ಪಿಲಿಕುಳದಿಂದ ನುರಿತರನ್ನು ಘಟನಾ ಸ್ಥಳಕ್ಕೆ ಕರೆಯಿಸಬೇಕಾದ ದುಸ್ಥಿತಿ ಇಲಾಖೆಯದು.
ಜೀವಕ್ಕೆ ಕುತ್ತಾದರೆ ಹೊಣೆ ಯಾರು?
ಅಪಾಯಕಾರಿ ಉರಗಗಳನ್ನು ಸೆರೆ ಹಿಡಿಯುವುದಕ್ಕೆ ಅರಣ್ಯಇಲಾಖೆಯು ಉರಗ ಪ್ರೇಮಿ ಅನಿಲ್ ಪ್ರಭು ಅವರನ್ನು ಆಶ್ರಯಿಸುತ್ತದೆ. ಕಾನೂನು ಚೌಕಟ್ಟಿನಲ್ಲಿ ಅರಣ್ಯ ಇಲಾಖೆ ಯಾವುದೇ ರೀತಿಯಲ್ಲಿ ಅನುಮತಿ ನೀಡದೇ, ಕೆಲವೊಂದು ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಯಾರು ಹೊಣೆ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ ಉತ್ತರಿಸಬೇಕಿದೆ.