ಬಂಟ್ವಾಳ, ಮಾ 15 (DaijiworldNews/SM): ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಜಿಪಮುನ್ನೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸ್ಥಳೀಯ ಗ್ರಾಮಗಳಿಗೆ ನೀರು ನೀಡದೆ ಅನ್ಯಾಯ ಎಸಗಲಾಗಿದೆ. ಕೇವಲ ಉಳ್ಳಾಲ ನಗರ ಸಭಾ ವ್ಯಾಪ್ತಿಗೆ ಮಾತ್ರ ನೀರು ಒದಗಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಂಚ ಗ್ರಾಮಗಳ ಗ್ರಾಮಸ್ಥರು ನಾಗರಿಕ ಸಮಿತಿಯಡಿ ಒಗ್ಗೂಡಿ ಮಂಗಳವಾರ ಯೋಜನೆಯ ಘಟಕದ ಬಳಿ ಪ್ರತಿಭಟನೆ ನಡೆಸಿದರು.
ಜೀವ ಕೊಡಲೂ ಸಿದ್ದ, ನೀರು ಕೊಡಲೂ ಬದ್ದ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಉಳ್ಳಾಲ ನಗರಕ್ಕೆ ಬಿಡಿ ಎಲ್ಲಿಗೆ ಬೇಕಾದರೂ ನಾವು ನೀರು ಕೊಡಲು ರೆಡಿ ಇದ್ದೇವೆ. ಆದರೆ ಸ್ಥಳೀಯ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಮಾಡದೆ ಇತರೆಡೆಗೆ ನೀರು ಕೊಡಲು ಬಿಡುವುದೇ ಇಲ್ಲ. ಜೀವ ಕೊಟ್ಟಾದರೂ ನಮ್ಮ ನೀರಿನ ಹಕ್ಕನ್ನು ಪಡೆದುಕೊಳ್ಳಲು ನಾವು ತಯಾರಾಗಿದ್ದೇವೆ. ಗ್ರಾಮಸ್ಥರ ಬೇಡಿಕೆಗೆ ಸರಕಾರ ಸೂಕ್ತ ಸಮಯದಲ್ಲಿ ಮನ್ನಣೆ ನೀಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ರೀತಿಯ ಹೋರಾಟಗಳನ್ನು ಸಂಘಟಿಸುವುದಾಗಿ ಪ್ರತಿಭಟನಾ ನಿರತ ಗ್ರಾಮಸ್ಥರು ಎಚ್ಚರಿಸಿದರು.