ಮಂಗಳೂರು, ಮಾ 15 (DaijiworldNews/DB): ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರನ್ನು ಕರೆದೊಯ್ಯಲೆಂದು ಕಳೆದ ನಾಲ್ಕು ವರ್ಷಗಳ ಹಿಂದೆ ಪರಿಚಯಿಸಲಾಗಿದ್ದ ಪರಿಸರಸ್ನೇಹಿ ಎಲೆಕ್ಟ್ರಿಕ್ ವಾಹನಗಳು ಕಳೆದ ಕೆಲವು ತಿಂಗಳುಗಳಿಂದ ಕಾರ್ಯಾಚರಣೆ ನಡೆಸದೆ ನಿಷ್ಕ್ರಿಯವಾಗಿವೆ. ಇದರಿಂದ ನಿಸರ್ಗಧಾಮದೊಳಗೆ ಪ್ರವಾಸಿಗರು 3.5 ಕಿಮೀ ದೂರ ನಡೆದೇ ಸಾಗಬೇಕಾಗಿದೆ.
ಪಿಲಿಕುಳ ನಿಸರ್ಗಧಾಮದೊಳಗೆ ಪ್ರವಾಸಿಗರನ್ನು ಕರೆದೊಯ್ಯಲೆಂದು 2019ರ ಜನವರಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಜಂಟಿಯಾಗಿ 1 ಕೋಟಿ ರೂ. ವೆಚ್ಚದಲ್ಲಿ 16 ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಾಗಿತ್ತು. ವಾಮಂಜೂರು ಮತ್ತು ಮೂಡುಶೆಡ್ಡೆ ಗ್ರಾಮಗಳಲ್ಲಿ ಹರಡಿರುವ ಪಿಲಿಕುಳದ ಸೌಂದರ್ಯ ಆಸ್ವಾದಿಸಲು ಪ್ರವಾಸಿಗರಿಗೆ 3.5 ಕಿಮೀ ನಡಿಗೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವಾಹನಗಳು ಸಹಕಾರಿಯಾಗಿದ್ದವು. ಅಲ್ಲದೆ ವಿಕಲಚೇತನರು, ವಯಸ್ಸಾದವರಿಗೆ ಹೆಚ್ಚು ಉಪಯುಕ್ತವಾಗಿತ್ತು. ಖಾಸಗಿ ವಾಹನಗಳಿಂದ ಪರಿಸರದ ಮೇಲಾಗುವ ಹಾನಿಯನ್ನು ತಪ್ಪಿಸಲೂ ಈ ವಾಹನಗಳ ಉಪಯೋಗ ಉತ್ತಮವಾಗಿತ್ತು.
ಈ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಜೈವಿಕ ಉದ್ಯಾನವನ, ಬೋಟಿಂಗ್ ಸೆಂಟರ್, ಹೆರಿಟೇಜ್ ಗ್ರಾಮ, ಅರ್ಬೊರೇಟಂ ಮತ್ತು ಗುತ್ತುಮನೆಗೆ ತಲಾ 40 ರೂ. ಮಕ್ಕಳಿಗೆ 20 ರೂ. ಶುಲ್ಕ ವಿಧಿಸಲಾಗಿದ್ದು, ಅಂಗವಿಕಲರಿಗೆ ಉಚಿತವಾಗಿ ಸೇವೆ ನೀಡಲಾಗುತ್ತಿತ್ತು. ಇದೀಗ ವಾಹನಗಳು ನಿಷ್ಕ್ರಿಯವಾಗಿರುವುದರಿಂದ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಅನನುಕೂಲವಾಗಿದೆ.
ಮೂಲಗಳ ಪ್ರಕಾರ, ಸರಿಯಾದ ನಿರ್ವಹಣೆ ಇಲ್ಲದೆ 16 ವಾಹನಗಳು ಮೂಲೆ ಸೇರಿದ್ದು, ಇವುಗಳ ಪೈಕಿ ಎರಡು ವಾಹನಗಳು ಮಾತ್ರ ಬಳಕೆಗೆ ಯೋಗ್ಯವಾದ ಸ್ಥಿತಿಯಲ್ಲಿವೆ ಎಂದು ತಿಳಿದು ಬಂದಿದೆ.
ಇನ್ನು ಈ ವಾಹನಗಳ ಚಾಲಕರನ್ನಾಗಿ ಮಹಿಳೆಯರನ್ನೇ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಸಂಚಾರ ಸ್ಥಗಿತಗೊಂಡಿರುವುದರಿಂದಾಗಿ ಅವರಿಗೂ ಕೆಲಸವಿಲ್ಲದಂತಾಗಿದೆ.
ಪಿಲಿಕುಳದಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಚಾಲನೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇದನ್ನು ಓಡಿಸುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ನನಗೆ ತಿಳಿದ ಪ್ರಕಾರ ಎಲ್ಲಾ ವಾಹನಗಳೂ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಿ.ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ದಾಯ್ಜಿವರ್ಲ್ಡ್ ಜತೆ ಮಾತನಾಡಿದ ಹೋರಾಟಗಾರ ಹನುಮಂತ ಕಾಮತ್, ಪಿಲಿಕುಳ ನಿಸರ್ಗಧಾಮದಲ್ಲಿ ನಾಲ್ಕು ತಿಂಗಳಿಂದ ಎಲೆಕ್ಟ್ರಿಕ್ ವಾಹನ ಬಂದ್ ಆಗಿದ್ದು, ಉದ್ಯಾನದ ವಿಶಾಲ ಪ್ರದೇಶಕ್ಕೆ ಹಿರಿಯ ನಾಗರಿಕರು ಭೇಟಿ ನೀಡಲು ಸಮಸ್ಯೆಯಾಗಿದೆ. ಸಂಬಂಧಿಸಿದ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಎಲ್ಲ ವಿದ್ಯುತ್ ವಾಹನಗಳು ಸ್ಥಗಿತಗೊಂಡಿವೆ. ವಾಹನಗಳ ಟೈರ್ಗಳನ್ನು ತೆಗೆಯಲಾಗಿದೆ. ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು. ಇಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ರಾಜಕೀಯ ಲಾಬಿ ಭಾಗಿಯಾಗಿರುವ ಶಂಕೆ ಇದೆ ಎಂದು ಹೇಳಿದ್ದಾರೆ.