ಮಂಗಳೂರು, ಮಾ 19(SM): ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದ ಹಲವು ಕ್ಷೇತ್ರಗಳು ಬಹಳಷ್ಟು ಕುತೂಹಲವನ್ನುಂಟು ಮಾಡಿದ್ದವು. ಇವುಗಳಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವೂ ಕೂಡ ಒಂದಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಕುತೂಹಲಗಳು ಹಲವು ದಿನಗಳಿಂದ ಕಾಡುತ್ತಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಕೆ. ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಬಿಜೆಪಿಯ ಭದ್ರ ಕೋಟೆಗೆ ಈ ಬಾರಿ ಲಗ್ಗೆ ಇಡಲು ಹಿರಿಯ ಕಾಂಗ್ರೆಸ್ ಮುಖಂಡನನ್ನು ಇಳಿಸಲಾಗುತ್ತಿದ್ದು, ಕರಾವಳಿಯಲ್ಲಿ ಹೆಚ್ಚಿರುವ ಬಿಲ್ಲವರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಈ ಬಾರಿ ರಾಜ್ಯಸಭಾ ಸದಸ್ಯ ಬಿ. ಕೆ. ಹರಿಪ್ರಸಾದ ಅವರನ್ನು ಕಣಕ್ಕಿಳಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ಹಲವು ಮಂದಿ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ರಮಾನಾಥ ರೈ, ಡಾ. ರಾಜೇಂದ್ರ ಕುಮಾರ್, ವಿನಯಕುಮಾರ್ ಸೊರಕೆ, ಮೊಯ್ದೀನ್ ಬಾವಾ, ಐವನ್ ಡಿಸೋಜ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಇವರಲ್ಲಿ ರಮಾನಾಥ ರೈ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.
ರಮಾನಾಥ್ ರೈ ಅವರೇ ದ.ಕ. ಲೋಕಸಭೆಯಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಅಲ್ಲದೆ, ಮಾಜಿ ಸಚಿವರಾಗಿದ್ದರಿಂದ ಮಂಗಳೂರಿನ ಮೇಲೆ ಅವರು ಹಿಡಿತವನ್ನು ಕೂಡ ಹೊಂದಿದ್ದರು. ಆದರೆ, ಅಂತಿಮ ಗಳಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್, ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರಿಗೆ ಮಣೆ ಹಾಕಿದೆ ಎನ್ನಲಾಗಿದೆ.