ಕುಂದಾಪುರ, ಮಾ 14 (DaijiworldNews/SM): ಪ್ರಧಾನಿ ಮೋದಿಯವರ ಅಭಿವೃದ್ದಿ ಮಂತ್ರದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಗದ್ದುಗೆ ಹಿಡಿಯಲಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಚುನಾವಣೆ ಪೂರ್ವ ಸಿದ್ಧತೆ ಹಿನ್ನೆಲೆ ರಾಜ್ಯಾದ್ಯಂತ ಸಂಚರಿಸುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ಕುಂದಾಪುರದಿಂದ ಸೈಬ್ರಕಟ್ಟೆಯ ವರೆಗೆ ನಡೆದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಉತ್ತರಪ್ರದೇಶದ 395ರಲ್ಲಿ ಕೇವಲ ನಾಲ್ಕು ಕ್ಷೇತ್ರದಲ್ಲಿ ಮಾತ್ರ ಡಿಪಾಸಿಟ್ ಉಳಿಸಿಕೊಂಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಒಂದು ಸೀಟು ಗೆಲ್ಲಲಾಗುವುದಿಲ್ಲ ಎಂದರು.
ವಿಶ್ವದಲ್ಲಿಯೇ ಸಿಗದಿರುವಂತಹಾ ಅಪರೂಪದ ನಾಯಕ ನರೇಂದ್ರ ಮೋದಿ ನಮ್ಮ ದೇಶದಲ್ಲಿ ಪ್ರಧಾನಿಯಾಗಿದ್ದಾರೆ ಎಂದ ಅವರು, ಮೋದಿ ಅಭಿವೃದ್ಧಿ ಯೋಜನೆ ನಿರೀಕ್ಷೆಗೂ ಮೀರಿ ಜನರಿಗೆ ತಲುಪುತ್ತಿದ್ದು, ಈ ಬಾರಿ ಕರ್ನಾಟಕದಲ್ಲಿಯೂ ಬಿಜಿಪಿ ಸರ್ಕಾರ ರಚಿಸುತ್ತದೆ ಎಂದರು. ಜಲಜೀವನ್ ಮುಖಾಂತರ ಮನೆ ಮನೆಗೆ ಗಂಗೆ, ರಸ್ತೆ, ದೀಪ, ಶೌಚಾಲಯಗಳನ್ನು ನೀಡಿದ ಏಕೈಕ ಪ್ರದಾನಿ ನರೇಂದ್ರ ಮೋದಿ ಎಂದರು. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಪ್ರತ್ಯೇಕ ದೇಶವಾಗಿ ಉಳಿಯಲ್ಲ. ಬದಲಾಗಿ ಅದು ಭಾರತಕ್ಕೆ ಸೇರುತ್ತದೆ ಎಂದರು.
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಲೆಮಹದೇಶ್ವರ ಬೆಟ್ಟದಿಂದ ಹಾಗೂ ರಾಜನಾಥ ಸಿಂಗ್ ಅವರು ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ ನಂದಗಡದಿಂದ ಆರಂಭಿಸಿದ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಯಾಗುತ್ತಿದೆ. ಮೋದಿಯವರ ಜನಪರ ಯೋಜನೆಗಳನ್ನು ಮತದಾರರ ಮುಂದಿಡುತ್ತಾ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಬೇಕಿದೆ ಎಂದು ಕೇಂದ್ರದ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದರು.
ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಮಧ್ಯಾಹ್ನ 3 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಿದ ಯಾತ್ರೆಗೆ ಬಾರ್ಕೂರಿನಲ್ಲಿ ಅದ್ದೂರಿ ಸ್ವಾಗತ ನಡೆಯಿತು. ನಂತರ ಬೈಕ್ ಜಾಥ ಮುಖೇನ ಸಾಯಬ್ರಕಟ್ಟೆ ತಲುಪಿ ಸೈಬ್ರಕಟ್ಟೆ ಬಸ್ ನಿಲ್ದಾಣ ಸಮೀಪ ಸಾರ್ವಜನಿಕ ಸಭೆ ನಡೆಯಿತು.