ಉಡುಪಿ, ಮಾ 14 (DaijiworldNews/HR): ಬಂಟ ಸಮುದಾಯ ಬಹು ದೊಡ್ಡ ಶಕ್ತಿ ಇರುವ ಸಮುದಾಯ, ಅವರ ಭಾವನೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಸಮಾಜ ಕಲ್ಯಾಣ ಅಭಿವೃದ್ದಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಬಂಟ ಸಮುದಾಯದ ನಿಗಮ ರಚನೆಯ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಅನೇಕರು ನಿಗಮಗಳನ್ನು ಕೇಳಿದ್ದಾರೆ. ನಾರಾಯಣಗುರು ನಿಗಮ, ಬಂಜಾರ ನಿಗಮ, ಗಾಣಿಗ ನಿಗಮಗಳನ್ನು ಈಗಾಗಲೇ ನೀಡಲಾಗಿದೆ. ಅವರವರು ಬೇಡಿಕೆಗಳನ್ನು ಇಟ್ಟಾಗ ಪರಿಶೀಲನ ಮಾಡುವ ಕ್ರಮ ಇರುತ್ತದೆ. ಅವಕಾಶ ಆದರೆ, ಬಂಟ ಸಮುದಾಯ ಬಹುದೊಡ್ಡ ಶಕ್ತಿ ಇರುವಂಥದ್ದು, ಅವರ ಭಾವನೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.
ವಿದೇಶದಲ್ಲಿ ರಾಹುಲ್ ಗಾಂಧಿ ಭಾರತದ ಬಗ್ಗೆ ಲಘು ಮಾತು ವಿಚಾರಕ್ಕೆ ಪ್ರತಿಕಿಯಿಸಿದ ಸಚಿವ ಕೋಟ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶದ ಯುನಿವರ್ಸಿಟಿಯಲ್ಲಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಾರೆ. ಬೇರೆ ದೇಶಗಳು ಮಧ್ಯಪ್ರವೇಶಿಸಬೇಕು ಎನ್ನುವ ಮಟ್ಟಕ್ಕೆ ಮಾತನಾಡಿದ್ದಾರೆ. ಕಾಂಗ್ರೆಸ್ನ ಹಿರಿಯ ತಲೆಮಾರು ಹೇಗೆ ಸಮರ್ಥಿಸುತ್ತೀರಿ? ಒಂದು ರಾಷ್ಟ್ರೀಯ ಪಕ್ಷದ, ಕಾಂಗ್ರೆಸ್ನ ಪರಂಪರೆಯ ನಾಯಕರು ಈ ಹೇಳಿಕೆಯನ್ನು ಹೇಗೆ ಸಮರ್ಥಿಸುತ್ತೀರಿ? ರಾಹುಲ್ ಗಾಂಧಿ ಯೋಜನೆ ಏನು? ಚಿಂತನೆ ಏನು? ರಾಷ್ಟ್ರವಾದದ ಬಗ್ಗೆ ಅವರ ನಿಲುವೇನು? ರಾಷ್ಟ್ರದ ಪ್ರಜಾಪ್ರಭುತ್ವದ ಬಗ್ಗೆ ಇರುವ ಗೌರವ ಏನು ಎಂಬ ಬಗ್ಗೆ ದೇಶ ವಿದೇಶದಲ್ಲಿ ಚರ್ಚೆಯಾಗುತ್ತಿದೆ. ಈ ತಪ್ಪು ಮಾಡಿದ್ದಕ್ಕೋಸ್ಕರ ಕ್ಷಮೆ ಕೇಳಬೇಕೆಂದು ರಾಹುಲ್ ಗಾಂಧಿಗೆ ಒತ್ತಾಯಿಸಿದ್ದೇವೆ ಎಂದಿದ್ದಾರೆ.
ಇನ್ನು ಪ್ರಪಂಚವೇ ಮೋದಿ ಮೂಲಕ ಭಾರತವನ್ನು ಗೌರವಿಸುತ್ತಿದೆ. ರಾಹುಲ್ ಗಾಂಧಿ ಈ ರೀತಿ ಹೇಳಿಕೆ ಕೊಟ್ಟಿರುವುದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ ಪಕ್ಷ ಒಂದೋ ಖಂಡಿಸಬೇಕು ಇಲ್ಲ ತಿಳುವಳಿಕೆ ಹೇಳಬೇಕು. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಕೆಲ ಬುದ್ಧಿಜೀವಿಗಳು ಅಸಹಿಷ್ಟುತೆ ಎಂದರು. ಈ ಬಗ್ಗೆ ವಿಧಾನ ಪರಿಷತ್ ನಲ್ಲಿ ಚರ್ಚೆಯೂ ಆಯ್ತು. ಆಡಳಿತ ಪಕ್ಷದ ಸಭಾ ನಾಯಕರು ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದರು. ಅನೇಕ ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡಿದ್ದೇವೆ ಎಂದರು. ಎಷ್ಟು ಜನ ಪ್ರಶಸ್ತಿ ವಾಪಸ್ಸು ಮಾಡಿದ್ದಾರೆ ಎಂದು ನಾನು ಕೇಳಿದೆ. ಪ್ರಶಸ್ತಿ ಯಾರು ವಾಪಸ್ ಮಾಡಿಲ್ಲ. ಒರಿಜಿನಲ್ ಪ್ರಮಾಣ ಪತ್ರ ಕೂಡ ವಾಪಸ್ ಕೊಟ್ಟಿಲ್ಲ. ಕೆಲವರು ಜೆರಾಕ್ಸ್ ಪ್ರತಿ ವಾಪಾಸ್ ಕೊಟ್ಟಿದ್ದಾರೆ ಎಂದು ಅವತ್ತಿನ ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು. ಭಾರತದ ಬಗ್ಗೆ ಅಸಹಿಷ್ಣುತೆ ಅನ್ನೋದೇ ಒಂದು ಡೋಂಗಿ. ತಪ್ಪು ಮಾಡಿದ ರಾಹುಲ್ ಗಾಂಧಿ ಕ್ಷಮೆ ಕೇಳಿದರೆ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಗೌರವ ಉಳಿಯುತ್ತೆ ಎಂದು ಹೇಳಿದ್ದಾರೆ.